ನಿಸರ್ಗ ರಮಣೀಯ ಸೌಂದರ್ಯದ ಚಾರ್ಮಾಡಿ ಘಾಟಿ ಪರಿಸರದಲ್ಲಿ, ಪ್ರಕೃತಿ ಸೌಂದರ್ಯ ವೀಕ್ಷಣೆಯ ನೆಪದಲ್ಲಿ ಪ್ರವಾಸಿಗರು ಅನಗತ್ಯವಾಗಿ ಬೆಟ್ಟ,ಗುಡ್ಡಗಳನ್ನು ಏರುತ್ತಾ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಲು ಮುಂದಾಗುತ್ತಿರುವುದು ಯಥಾಪ್ರಕಾರ ನಡೆಯುತ್ತಿದೆ.
ಚಾರ್ಮಾಡಿ ಘಾಟಿ ಪರಿಸರವು ಎತ್ತರವಾದ ಗುಡ್ಡ, ಬೆಟ್ಟಗಳನ್ನು ಹೊಂದಿದ್ದು ಇಲ್ಲಿ ಅನೇಕ ಕಲ್ಲುಬಂಡೆಗಳು ಇವೆ. ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವ ಪ್ರವಾಸಿಗರು ರಸ್ತೆಯಿಂದ ಹತ್ತಾರು ಅಡಿ ಎತ್ತರದಲ್ಲಿರುವ ಕಲ್ಲುಬಂಡೆಗಳನ್ನು ಏರಿ ಫೋಟೋಗಳನ್ನು ತೆಗೆಯುವುದು ಮಾಮೂಲಾಗಿದೆ. ಈ ಕಲ್ಲುಬಂಡೆ, ಗುಡ್ಡಗಳನ್ನು ಏರಿ ಇಳಿಯುವಾಗ ಒಂದಿಷ್ಟು ಸಮತೋಲನ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಅಪಾಯದ ಅರಿವಿದ್ದರೂ ಇಂತಹ ಅನಗತ್ಯ ಸರ್ಕಸ್ ಗಳನ್ನು ಪ್ರವಾಸಿಗರು ನಡೆಸುತ್ತಿರುವುದು ವಿಪರ್ಯಾಸ.
ಪ್ರವಾಸಿಗರ ಎಗ್ಗಿಲ್ಲದ ಈ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಪ್ರವಾಸಿಗರಿಗೆ ಇಂತಹ ಕೆಲಸಗಳನ್ನು ನಡೆಸಲು ಇನ್ನಷ್ಟು ಸ್ಪೂರ್ತಿ ನೀಡುತ್ತಿದೆ.
ಮಳೆಗಾಲದಲ್ಲಿ ಅಪಾಯ ಇನ್ನೂ ಹೆಚ್ಚು
ಮಳೆ ಆರಂಭವಾದರೆ ಘಾಟಿ ಸೌಂದರ್ಯ, ಆಕರ್ಷಣೆ ಇನ್ನಷ್ಟು ಹೆಚ್ಚುತ್ತದೆ. ಇದರ ವೀಕ್ಷಣೆಗೆ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಮಳೆ ಬರುವಾಗ ಹೆಚ್ಚು ಜಾರುವ ಬಂಡೆಗಳನ್ನು ಏರಿ ಇಳಿಯುವ ಪ್ರವಾಸಿಗರ ಸಂಖ್ಯೆಯು ಹೆಚ್ಚುತ್ತದೆ. ಹಾಗೂ ಕಳೆದ ವರ್ಷಗಳಲ್ಲಿ ಕೆಲವು ಅನಾಹುತಗಳು ಸಂಭವಿಸಿವೆ.
ನೋ ಪಾರ್ಕಿಂಗ್ ಬಳಿ ಪಾರ್ಕಿಂಗ್
ಘಾಟಿ ಪರಿಸರದ ಹಲವೆಡೆ ನೋ ಪಾರ್ಕಿಂಗ್ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ಈ ಆದೇಶ ಫಲಕಗಳಿಗೆ ಮಾತ್ರ ಸೀಮಿತವಾಗಿದೆ. ನೋ ಪಾರ್ಕಿಂಗ್ ಫಲಕದ ಬಳಿಯೇ ಅಡ್ಡಾದಿದ್ದಿವಾಹನಗಳನ್ನು ನಿಲ್ಲಿಸಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಲಾಗುತ್ತಿದೆ.
ಕಡಿವಾಣ ಅಗತ್ಯ
ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಘಾಟಿ ಪರಿಸರದಲ್ಲಿ ನಡೆಯುವ ಈ ಎಲ್ಲಾ ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ.