ಕುಂದಾಪುರ: ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗಿಗೆ ಭಕ್ತರ ಸೋಗಿನಲ್ಲಿ ಬಂದ ಕಳ್ಳರು ಕನ್ನ ಹಾಕಿದ್ದಾರೆ.
ಮೂಲತಃ ಕೇರಳ ರಾಜ್ಯದ ಹಣಂಗೊರು ಶಾರದ ನಗರದ ನಿವಾಸಿಗಳಾದ ಪ್ರವೀಣ ಎಂಬುವರು ತನ್ನ ಪತ್ನಿ ವಾಣಿಶ್ರೀ ಹಾಗೂ ಮಕ್ಕಳೊಂದಿಗೆ ಸುರತ್ಕಲ್ ನಲ್ಲಿ ವಾಸವಾಗಿದ್ದರು. ಭಾನುವಾರ ಕೊಲ್ಲೂರು ದೇವಸ್ಥಾನಕ್ಕೆ ಬರುವಾಗ ಮನೆಯಲ್ಲಿ ಯಾರೂ ಇಲ್ಲದ ಕಾರಣ 13½ ಪವನ್ ಚಿನ್ನಾಭರಣಗಳನ್ನು ಚಿಕ್ಕ ಪರ್ಸ್ ನಲ್ಲಿ ಹಾಕಿ ವ್ಯಾನಟಿ ಬ್ಯಾಗ್ ನಲ್ಲಿ ಇಟ್ಟುಕೊಂಡು ಬಂದಿದ್ದರು. ಬೆಳಿಗ್ಗೆ 11-00 ಗಂಟೆಗೆ ದೇವರ ದರ್ಶನ ಮಾಡಿ ಬೆಳಿಗ್ಗೆ 11-30 ಗಂಟೆಗೆ ದೇವಸ್ಥಾನದ ಹೊರಗಡೆ ಬಂದಾಗ ಪ್ರವೀಣ ಅವರ ಹೆಂಡತಿಯ ವ್ಯಾನಟಿ ಬ್ಯಾಗ್ ನ ಜೀಪ್ ಓಪನ್ ಆಗಿತ್ತೆನ್ನಲಾಗಿದೆ.
ತಕ್ಷಣ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಚಿನ್ನಾಭರಣಗಳಿದ್ದ ಚಿಕ್ಕ ಪರ್ಸ್ ಕಳವಾಗಿದ್ದು ಬೆಳಕಿಗೆ ಬಂದಿದೆ. ಅದಾಗಲೇ ಭಕ್ತರ ಸೋಗಿನಲ್ಲಿದ್ದ ಕಳ್ಳರು ವಾಣಿಶ್ರೀ ಬ್ಯಾಗಿಗೆ ಕನ್ನ ಹಾಕಿದ್ದರು. ಚಿಕ್ಕ ಪರ್ಸ್ ನಲ್ಲಿದ್ದ 7½ ಪವನ್ ಚಿನ್ನದ ಚೈನ್ -1, 1½ ಪವನ್ ಚಿನ್ನದ ಬಳೆ -2 ಒಟ್ಟು 3 ಪವನ್, 1½ ಪವನ್ ಚಿನ್ನದ ಚೈನ್ -1, ½ ಪವನ್ ಚಿನ್ನದ ಬಳೆ-1, 4 ಜೊತೆ ಚಿನ್ನದ ಕಿವಿ ಓಲೆ ಒಟ್ಟು -1 ಪವನ್ ಎಲ್ಲಾ ಒಟ್ಟು 13½ ಪವನ್ (108 ಗ್ರಾಂ) ಸೇರಿದಂತೆ ಒಟ್ಟು ಅಂದಾಜು ಮೌಲ್ಯ 4 ಲಕ್ಷದ 75 ಸಾವಿರ ರೂಪಾಯಿ ಚಿನ್ನಾಭರಣ ಸ್ವತ್ತುಗಳನ್ನು ಕದ್ದೊಯ್ದಿದ್ದಾರೆ.
ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.