ನೆಲ್ಯಾಡಿ: ಗುಜರಿ ವ್ಯಾಪಾರಿಯೋರ್ವ ದಿಢೀರ್ ಮಂತ್ರವಾದಿಯಾದ ಬಗ್ಗೆ ಸಂದೇಹಗೊಂಡ ಯುವಕರ ಗುಂಪು ಆತನ ಮೇಲೆ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಘಟನೆಯ ಬಗ್ಗೆ ಹಲ್ಲೆಗೀಡಾದ ಮಂತ್ರವಾದಿಯು ಪೊಲೀಸರಿಗೆ ದೂರು ನೀಡಿದ್ದರೂ ಆ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ವಡೆಂಕೇರಿ ಮನೆ ನಿವಾಸಿ 59ರ ಹರೆಯದ ಮಹಮ್ಮದ್ ಅಲಿ ಹಲ್ಲೆಗೀಡಾದ ವ್ಯಕ್ತಿ. ಆತ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ದಂಪತಿಗಳ ಮಗುವಿನ ಅನಾರೋಗ್ಯಕ್ಕೆ ಸಂಬಂಧಿಸಿ ನೂಲು ಮಂತ್ರಿಸಿ ಕೊಡುವ ವೇಳೆ ಸ್ಥಳಕ್ಕೆ ಬಂದ ಅನ್ಸಾರ್ ಮತ್ತಿತರ ಯುವಕರ ಗುಂಪು ಗುಜರಿ ವ್ಯಾಪಾರದ ನಡುವೆ ಮಂತ್ರವಾದಿಯಾದ ಬಗೆ ಹೇಗೆಂದು ಪ್ರಶ್ನಿಸಿ ನಕಲಿ ಮಂತ್ರವಾದಿ ಎಂದು ಆರೋಪಿಸಿ ಹಲ್ಲೆ ನಡೆಸಿತ್ತು. ಈ ಬಗ್ಗೆ ಹಲ್ಲೆಗೀಡಾದ ಮಂತ್ರವಾದಿ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣವು ಜೂನ್ 3ರಂದು ನಡೆದಿದ್ದು, ಹಲ್ಲೆ ನಡೆಸುವ ವೀಡಿಯೋ ವೈರಲ್ ಆದ ಬಳಿಕ ಉಭಯ ತಂಡದಿಂದ ಮಾತುಕತೆ ನಡೆದು ಪ್ರಕರಣವನ್ನು ರಾಜಿಯಲ್ಲಿ ಬಗೆಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.