ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಆರ್ಲ ನಿವಾಸಿಯಾದ ಪಿ.ಐ ಕುರಿಯ ಕೋಸ್ ಮತ್ತು ಮರಿಯಮ್ಮ ದಂಪತಿಗಳ ಮುದ್ದಿನ ಮಗನಾಗಿ ಜನಿಸಿದ. ರೆ.ಫಾ.ಪಿ.ಕೆ. ಅಬ್ರಹಾಂ ಕೋರ್ ಎಪಿಸ್ಕೋಪ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಕೊಣಾಲು ಇಲ್ಲಿ ಆರಂಭಿಸಿದರು. ತನ್ನ ಪ್ರೌಢ ಶಿಕ್ಷಣವನ್ನು ಸಂತ ಜಾರ್ಜ್ ಪ್ರೌಢಶಾಲೆ ನೆಲ್ಯಾಡಿಯಲ್ಲಿ ಆರಂಭಿಸಿ ಹೆಮ್ಮೆಯ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿ ಸಂಸ್ಥೆಯ ಕೀರ್ತಿಯನ್ನು ಬೆಳಗಿಸಿದರು. ಮುಂದಿನ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿಯಲ್ಲಿ ಪೂರೈಸಿದ ಶ್ರೀಯುತರ ಒಲವು ಆಧ್ಯಾತ್ಮಿಕದತ್ತ ಹರಿಯಿತು. 1983 ರಲ್ಲಿ ಎರ್ನಾಕುಲಂನ ಗುರುದೀಕ್ಷಾ ಸಂಸ್ಥೆ(ಸೆಮಿನರಿ)ಗೆ ಸೇರಿ ಗುರು ದೀಕ್ಷೆಯನ್ನು ಕಲಿತು 1984ರಲ್ಲಿ ಗುರು ದೀಕ್ಷೆಯನ್ನು ಸ್ವೀಕರಿಸಿದರು. 1986 ರಲ್ಲಿ ಸೂಸಮ್ಮ ರವರನ್ನು ತನ್ನ ಬಾಳ ಸಂಗಾತಿಯನ್ನಾಗಿಸಿಕೊಂಡರು. 1987 ಜೂನ್ 27ರಂದು ಪೂಜ್ಯರು ಪೂರ್ಣ ಗುರು ದೀಕ್ಷೆಯನ್ನು ಸ್ವೀಕರಿಸಿ, ಕಣ್ಣೂರು, ಕಾಸರಗೋಡು, ಮಂಗಳೂರು, ಉಡುಪಿ ದಕ್ಷಿಣ ಕನ್ನಡದ ವಿವಿಧ ಚರ್ಚ್ ಗಳಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದರು. ಚರ್ಚ್ ಳ ಸಂಡೇ ಸ್ಕೂಲಿನ ಮಂಗಳೂರು ಡೈರಕ್ಟರೇಟ್ ನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಕಡಬ ರೋಟರಿ ಕ್ಲಬ್, ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಮುಂತಾದ ವಿವಿಧ ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಮುಖೀ ಸೇವೆಯನ್ನು ಸಲ್ಲಿಸಿದ್ದರು. ಸಂಯುಕ್ತ ಕ್ರಿಸ್ಮಸ್ ಕಡಬ ಹಾಗೂ ನೆಲ್ಯಾಡಿ ಇದರ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಅಪಾರ ಜನ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದಾರೆ.
2020ರಲ್ಲಿ ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗೆ ಪರಮಾಧ್ಯಕ್ಷರ ಒಪ್ಪಿಗೆ ಮೇರೆಗೆ ಪೂಜ್ಯರು ಕೋರ್ ಎಪಿಸ್ಕೋಪ ಪದವಿಯನ್ನು ಸ್ವೀಕರಿಸಿದರು.
ಇದೀಗ ತನ್ನ 60ನೇ ಸಂವತ್ಸರದ ಸವಿ ಕನಸುಗಳನ್ನು ನನಸಾಗಿಸ ಹೊರಟ ರೆ.ಫಾ.ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪ ರವರು. ಇವರ ಧರ್ಮಪತ್ನಿ ಕಡಬದ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಯಾಗಿರುವ ಶ್ರೀಮತಿ ಸೂಸಮ್ಮ, ಮಗ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಸ್ಟಾಪ್ ನರ್ಸ್ ಆಗಿರುವ ಅರುಣ್ ರಾಜ್ ಹಾಗೂ ಮಗಳು ಕತ್ತರ್ ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆಶಾರಾಣಿ ಇವರೊಂದಿಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಆರ್ಥಿಕ ನೆರವು ನೀಡುತ್ತಾ, ರೋಗಿಗಳ ಮನೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾ, ಧಾರ್ಮಿಕ ಭೇದ ಭಾವವಿಲ್ಲದೆ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದು ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುತ್ತಾ. ಸರ್ವರಿಗೂ ಪ್ರಾರ್ಥನೆ ಸಲ್ಲಿಸುವ Stanley ರೆ.ಫಾ.ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪ ಇವರು.
ಯೂಟ್ಯೂಬ್ ಚಾನಲ್ ನಲ್ಲಿ ಪ್ರತಿದಿನ ಸುವಾರ್ತೆಯನ್ನು ನೀಡುವ ಮೂಲಕ ದೇಶ ವಿದೇಶಗಳ ಅನೇಕ ಭಕ್ತ ಸಮೂಹ ಆನಂದವನ್ನು ಪಡೆಯುವಂತೆ ಮಾಡುತ್ತಿದ್ದಾರೆ.
“ಸಮಸ್ತ ಲೋಕ ಸುಖಿನೋ ಭವಂತು” ಎಂದು ಪ್ರಾರ್ಥಿಸುವ ಗುರುಗಳು ತಮ್ಮ ಗಾಡ್ ಫಾದರ್, ಗುರುಗಳ ಗುರುಗಳಾದ ಮೊರ್ ಪೋಲಿ ಕಾರ್ಪಸ್ ಗೀವರ್ಗೀಸ್ ಹಾಗೂ ತನಗೆ ವಿದ್ಯ ನೀಡಿ ಶಿಸ್ತಿನ ಸಿಪಾಯಿಯನ್ನಾಗಿಸಿದ ಗುರು ಅಬ್ರಹಾಂ ವರ್ಗೀಸ್ ವರನ್ನು ಸದಾ ಸ್ಮರಿಸಿಕೊಳ್ಳು ತ್ತಾರೆ.
ಜೂನ್ 6ನೇ ತಾರೀಖಿನಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು, 2023 ವರ್ಷ ಪೂರ್ತಿ ಷಷ್ಠಬ್ದ ಸಂಭ್ರಮದಲ್ಲಿರುವ ಪರಮಪೂಜ್ಯ ಗುರುಗಳಾದ ರೆ.ಫಾ.ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪ ರವರಿಗೆ ಜನ್ಮ ಷಷ್ಠಬ್ದಿಯ ಶುಭಾಶಯಗಳು. ದೇವರು ತಮಗೆ ಆಯುರಾರೋಗ್ಯ ಸೌಭಾಗ್ಯ ಕರುಣಿಸಲೆಂದು “ನೇಸರ ನ್ಯೂಸ್ ವರ್ಲ್ಡ್” ಬಳಗದಿಂದ ನಮ್ಮೆಲ್ಲರ ಪ್ರಾರ್ಥನೆ.