ನೆಲ್ಯಾಡಿ: ಕಳೆದ ಹಲವು ವರುಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಸ್ಥಾಪಕಾಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಅವರನ್ನು ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆದ ಮಹಿಳಾ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಮಾಡಿರುವಂತಹ ಸಾಧನೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಶ್ರೀಮತಿ ಉಷಾ ಅಂಚನ್ ಅವರಿಗೆ “ಮಹಿಳಾ ಸಾಧಕಿ” ಎಂಬ ಬಿರುದು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಇವರು ಕೊಣಾಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ, ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾಗಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಪ್ರಿಯದರ್ಶಿನಿ ಮಹಿಳಾ ಸಹಕಾರಿ ಸಂಘದ ನಿರ್ದೇಶಕಿಯಾಗಿ, ಕೊಣಾಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಲೂಕು ಪಂಚಾಯತ್ ಸದಸ್ಯರಾಗಿ, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕಿಯಾಗಿ, ಅಧ್ಯಕ್ಷೆಯಾಗಿ, ಬಿಲ್ಲವ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಆಟಿಕೂಟ ಎಂಬ ಕಾರ್ಯಕ್ರಮ ಆಯೋಜನೆ, ಬಿಲ್ಲವ ಮಹಿಳಾ ವೇದಿಕೆ ಸಂಚಾಲಕಿಯಾಗಿ, ಉಪಾಧ್ಯಕ್ಷೆಯಾಗಿ, ಗ್ರಾಮ ಸಮಿತಿ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.
ನೆಲ್ಯಾಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜು ಆರಂಭಕ್ಕೆ ಕಾರಣಕರ್ತರೂ ಆಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಸೇವೆ ಪರಿಗಣಿಸಿ ಇವರನ್ನು ಗೌರವಿಸಲಾಗಿದೆ.
ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕಲಾ ಮುಕ್ವೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿದರು. ಮಹಿಳಾ ವೇದಿಕೆ ಸಂಚಾಲಕಿ ವಿಶಾಲಾಕ್ಷಿ ಬನ್ನೂರು, ರೇಣುಕಾ ಕಣಿಯೂರು, ಬಿಲ್ಲವ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಸಮಿತಿಯವರು, ಬಿಲ್ಲವ ಮುಖಂಡರು ಉಪಸ್ಥಿತರಿದ್ದರು.