ಮಂಗಳೂರು: ಕರ್ನಾಟಕದಲ್ಲಿ ಜುಲೈ 10 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಕರಾವಳಿ ಭಾಗದಲ್ಲಿ ತೀವ್ರತೆಯ ಮಳೆಯಾಗುವ ಸಾಧ್ಯತೆಯಿರುವುದರಿಂದ ಜು.6ರ ಇಂದು ಮಧ್ಯಾಹ್ನದಿಂದ ಜು.7 ರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯಲ್ಲಿ ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು ಒಳನಾಡಿನ ಜಿಲ್ಲೆಗಳಲ್ಲೂ ಮುಂದಿನ ಎರಡು ದಿನ ವ್ಯಾಪಕ ಮಳೆಯಾಗಲಿದ್ದು, ಈ ಭಾಗದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ನೀಡಲಾಗಿದೆ.
ಈಗಾಗಲೇ ನಿರಂತರ ಮಳೆಯಿಂದ ಉಡುಪಿ ಹಾಗೂ ದಕ್ಷಿಣ ಕನ್ನಡದ ಹಲವು ಪ್ರದೇಶಗಳು ಜಲಾವೃತವಾಗಿದ್ದು ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು ತಗ್ಗು ಪ್ರದೇಶಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ದಿನಗಳಿಂದ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.