ಮಂಗಳೂರು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ನಡೆಸಲಾಗುವ ಪೂರಕ (ಸಪ್ಲಿಮೆಂಟರಿ) ಪರೀಕ್ಷೆಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎರಡು ಬಾರಿ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ರೆಗ್ಯುಲರ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ, ಅನಿವಾರ್ಯ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದೆ ವಂಚಿತರಾಗುವ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಶಾಲಾ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಮಂಡಳಿ ಮೊದಲ ಫಲಿತಾಂಶ ಪ್ರಕಟಗೊಂಡು ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸುತ್ತಿತ್ತು. ಮೊದಲ ಹಂತದಲ್ಲಿ ಅನುತ್ತೀರ್ಣರಾದ ಶೇ.75ರಷ್ಟು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಮಾಣ ಶೇ.50ರಷ್ಟು ಮಾತ್ರ!
ಆದ್ದರಿಂದ ಇನ್ನೊಂದು ಬಾರಿ ಪರೀಕ್ಷೆ ನಡೆಸಿ, ಎರಡನೇ ಬಾರಿಯೂ ಅನುತ್ತೀರ್ಣರಾಗಿರುವ ಇನ್ನಷ್ಟು ಮಂದಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಪ್ರಯತ್ನಿಸುವುದು ಇಲಾಖೆಯ ಉದ್ದೇಶ. ಆ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಹಾಗೂ ಹೆಚ್ಚಿನ ಶಿಕ್ಷಣ ಪಡೆಯಲು ಅನುವು ಮಾಡಿಕೊಡುವುದು ಇಲಾಖೆಯ ಚಿಂತನೆ. ಆದ್ದರಿಂದ ಮೊದಲ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾದ 15 ದಿನಗಳ ಒಳಗೆ ಎರಡನೇ ಪೂರಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.
ಒಂದು ವರ್ಷ ವ್ಯರ್ಥ
ಇಲ್ಲಿಯವರೆಗೆ ಪೂರಕ ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಬೇಕಾದರೆ ಒಂದು ವರ್ಷ ಕಾಯಬೇಕಿತ್ತು. ಇದರಿಂದ ಒಂದು ವರ್ಷ ವ್ಯರ್ಥವಾಗುವುದು ಮಾತ್ರವಲ್ಲದೆ, ಕೆಲವರು ಶಿಕ್ಷಣವನ್ನೇ ಅರ್ಧದಲ್ಲಿ ಮೊಟಕುಗೊಳಿಸುತ್ತಿದ್ದರು. ಈ ನಿಟ್ಟಿನಲ್ಲಿ ಹೊಸ ಪರೀಕ್ಷಾ ಕ್ರಮ ವಿದ್ಯಾರ್ಥಿಗಳಿಗೆ ವರದಾನವಾಗಿದೆ.
ಈ ಕುರಿತಂತೆ ಈಗಾಗಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶಿಕ್ಷಣ ಕ್ಷೇತ್ರದ ಪ್ರಮುಖರೊಂದಿಗೆ ಚರ್ಚೆ ನಡೆಸಿ, ರೂಪುರೇಷೆಗಳು, ಪರೀಕ್ಷಾ ಕ್ರಮಗಳ ಬಗ್ಗೆ ಕರಡು ಸಿದ್ಧಪಡಿಸುವಂತೆ ನಿರ್ದೇಶಿಸಿದ್ದಾರೆ.
ಲಘುವಾಗಿ ತೆಗೆದುಕೊಳ್ಳುವುದು ಬೇಡ
ಎರಡನೇ ಪೂರಕ ಪರೀಕ್ಷೆ ಆಯೋಜಿಸಲಾಗುತ್ತಿದೆ ಎಂದು ವಾರ್ಷಿಕ ಪರೀಕ್ಷೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅನುತ್ತೀರ್ಣ ಆದರೂ ಪರವಾಗಿಲ್ಲ, ಮತ್ತೆ ಪರೀಕ್ಷೆ ಬರೆಯಬಹುದು ಎನ್ನುವ ನಿಲುವಿಗೆ ವಿದ್ಯಾರ್ಥಿಗಳು ಬರಬಾರದು. ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಉತ್ತೀರ್ಣರಾಗಬೇಕು ಎನ್ನುವ ನಿಟ್ಟಿನಲ್ಲಿ ಸಚಿವ ಮಧು ಬಂಗಾರಪ್ಪ ಅವರು ಇಂತಹ ವಿಶೇಷ ಚಿಂತನೆ ಮಾಡಿದ್ದಾರೆ ಎಂದು ಇಲಾಖಾಧಿಕಾರಿ ತಿಳಿಸಿದ್ದಾರೆ.