Inspiration: 78ನೇ ವಯಸ್ಸಿನಲ್ಲೂ ಸಮವಸ್ತ್ರ ತೊಟ್ಟು 9ನೇ ತರಗತಿಯಲ್ಲಿ ಪಾಠ ಕೇಳುವ ವೃದ್ಧ

ಶೇರ್ ಮಾಡಿ

ಕಲಿಕೆಗೆ ವಯ್ಯಸ್ಸು ಎಂಬುದು ಇಲ್ಲವೇ ಇಲ್ಲ ಮನಸ್ಸು ಬೇಕು ಅಷ್ಟೇ. ಹೌದು ಇಲ್ಲೊಬ್ಬರು ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿರುವ 78 ವರ್ಷದ ಅಜ್ಜ ಸಮವಸ್ತ್ರ ಧರಿಸಿಕೊಂಡು ದಿನಾಲೂ ಮೂರು ಕಿಲೋಮೀಟರ್ ದೂರ ನಡೆದುಕೊಂಡೇ ಶಾಲೆಗೆ ಬಂದು ಮಕ್ಕಳೊಂದಿಗೆ ಪಾಠ ಕೇಳಿ ಸಂಜೆ ಮನೆಗೆ ನಡೆದುಕೊಂಡೇ ಹೋಗುತ್ತಾರೆ.

ನಿಜಕ್ಕೂ ಇವರ ಉತ್ಸಾಹ ಬೇರೆಯವರಿಗೂ ಮಾದರಿಯಾಗಿದೆ.
ಹೌದು ಮಿಜೋರಾಂನ ಚಂಫೈ ಜಿಲ್ಲೆಯ ಹ್ರೂಯಿಕಾನ್ ಗ್ರಾಮದ ಲಾಲ್ರಿಂಗ್ಥರಾ ಅವರ ಕಥೆ ಈಗ ಅನೇಕರಿಗೆ ಸ್ಫೂರ್ತಿಯಾಗಿದೆ. ಅವರು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹ್ರುಯಿಕಾವ್ನ್ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (ಆರ್‌ಎಂಎಸ್‌ಎ) ಪ್ರೌಢಶಾಲೆಯಲ್ಲಿ 9 ನೇ ತರಗತಿಗೆ ದಾಖಲಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇಂಡೋ-ಮ್ಯಾನ್ಮಾರ್ ಗಡಿಯ ಸಮೀಪದಲ್ಲಿರುವ ಖುವಾಂಗ್ಲೆಂಗ್ ಗ್ರಾಮದಲ್ಲಿ 1945 ರಲ್ಲಿ ಜನಿಸಿದ ಶ್ರೀ ಲಾಲ್ರಿಂಗ್ಥರಾ ಅವರು ತಮ್ಮ ತಂದೆ ಮರಣ ಹೊಂದಿದ ಕಾರಣ 2 ನೇ ತರಗತಿಯ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿರದ ಕಾರಣ ಅಲ್ಲದೆ ತಂದೆಗೆ ಒಬ್ಬನೇ ಮಗನಾಗಿದ್ದ ಲಾಲ್ರಿಂಗ್ಥರಾ ಮನೆಯ ಜವಾಬ್ದಾರಿಯನ್ನು ಚಿಕ್ಕ ವಯಸ್ಸಿನಲ್ಲೇ ಹೊರಬೇಕಾಯಿತು, ಮನೆಯ ಆರ್ಥಿಕ ಪರಿಸ್ಥಿತಿಯೂ ಸರಿ ಇಲ್ಲದ ಕಾರಣ ಓದಿಗೆ ಹಿನ್ನಡೆಯಾಗಿತ್ತು.
ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆಹೋಗುತ್ತಿದ್ದ ಕುಟುಂಬ ಅಂತಿಮವಾಗಿ 1995 ರಲ್ಲಿ ನ್ಯೂ ಹ್ರೂಯಿಕಾನ್ ಗ್ರಾಮವೊಂದರಲ್ಲಿ ನೆಲೆ ನಿಂತರು ಈ ವೇಳೆ ಜೀವನ ಸಾಗಿಸಲು ಅಲ್ಲೇ ಇರುವ ಚರ್ಚ್ ಒಂದರಲ್ಲಿ ಕಾವಲುಗಾರನಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದರು. ಇದರಿಂದ ಜೀವನ ನಡೆಸಲು ಒಂದು ಆಧಾರ ಸಿಕ್ಕಿದಂತಾಯಿತು.
ಹೀಗೆ ಕೆಲಸ ಮಾಡುತ್ತಲೇ ತನಗೆ ಇಂಗ್ಲಿಷ್ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಬೇಕು, ಟಿವಿ ಯಲ್ಲಿ ಬರುವ ಇಂಗ್ಲಿಷ್ ನ್ಯೂಸ್ ಅರ್ಥಮಾಡಿಕೊಳ್ಳಬೇಕು ಹಾಗೂ ಕೆಲವು ಕಛೇರಿಗಳಲ್ಲಿ ಅರ್ಜಿ ತುಂಬಲು ಇಂಗ್ಲಿಷ್ ಅತಿ ಅಗತ್ಯವಾಗಿತ್ತು ಹಾಗಾಗಿ ಇಂಗ್ಲಿಷ್ ಬಗ್ಗೆ ಜ್ಞಾನ ಪಡೆಯಲೆಂದು ಮತ್ತೆ ತನ್ನ 78ನೇ ವಯಸ್ಸಿನಲ್ಲಿ 9 ನೇ ತರಗತಿಗೆ ದಾಖಲಾತಿಯನ್ನು ಪಡೆದುಕೊಳ್ಳಲು ಶಾಲೆಗೆ ತೆರಳಿ ಅಲ್ಲಿ ಮುಖ್ಯೋಪಾಧ್ಯಾಯರಲ್ಲಿ ಮಾತುಕತೆ ನಡೆಸಿ ಬಳಿಕ ತರಗತಿಗೆ ಸೇರ್ಪಡೆಗೊಂಡರು.

3 ಕಿಲೋಮೀಟರ್ ನಡಿಗೆ :
ಶಾಲೆಯಿಂದ ಮನೆಗೆ ಸುಮಾರು ಮೂರು ಕಿಲೋಮೀಟರ್ ದೂರವಿದ್ದ ಕಾರಣ ದಿನಾ ಬೆಳಿಗ್ಗೆ ಸಮವಸ್ತ್ರ ಧರಿಸಿ, ಬೆನ್ನಿಗೆ ಬ್ಯಾಗ್ ಹೇರಿಕೊಂಡು ಶಾಲೆ ವರೆಗೂ ನಡೆದುಕೊಂಡೇ ಬಂದು ಮಕ್ಕಳೊಂದಿಗೆ ತರಗತಿಯಲ್ಲಿ ಕುಳಿತು ಪಾಠ ಕೇಳಿ ಮತ್ತೆ ಸಂಜೆ ಮನೆಗೆ ನಡೆದುಕೊಂಡು ಬಂದು ಬಳಿಕ ರಾತ್ರಿ ಮೊದಲು ಕೆಲಸ ಮಾಡುತ್ತಿದ್ದ ಚರ್ಚ್ ನಲ್ಲೆ ಕೆಲಸ ನಿರ್ವಹಿಸುತ್ತಿದ್ದರು.
ಎಲ್ಲರಿಂದ ಪ್ರಶಂಸೆ:

78 ನೇ ವಯಸ್ಸಿನಲ್ಲೂ ಬತ್ತದ ಲಾಲ್ರಿಂಗ್ಥರಾ ಅವರ ವಿದ್ಯಾಭ್ಯಾಸದ ಹುಮ್ಮಸ್ಸಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಲ್ಲದೆ ಇವರ ಉತ್ಸಾಹ ನಿಜಕ್ಕೂ ನಮಗೂ ಮಕ್ಕಳಿಗೂ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

Leave a Reply

error: Content is protected !!