ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಸಾಧ್ಯತೆ ಹೆಚ್ಚು. ಮುಖ್ಯವಾಗಿ ಡೆಂಗ್ಯೂ ಹರಡುವ ಸೊಳ್ಳೆಗಳ ಸಂತಾನೋತ್ಪತ್ತಿಗೆ ಮಳೆ – ಬಿಸಿಲಿನ ವಾತಾವರಣ ಸೂಕ್ತವಾಗಿದೆ. ಮನೆ, ಕಟ್ಟಡಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳು ಸಂತಾನೋತ್ಪತ್ತಿ ಮಾಡದಂತೆ ತಡೆಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಡೆಂಗ್ಯೂ ರೋಗದ ಲಕ್ಷಣಗಳೇನು, ಡೆಂಗ್ಯೂ ಹರಡುವುದು ಹೇಗೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಡೆಂಗ್ಯೂ ಹರಡುವುದು ಹೇಗೆ?
ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗ್ಯೂ ಹರಡುತ್ತದೆ. ರಕ್ತ ನಾಳಗಳಿಗೆ ಈ ವೈರಸ್ ಹಾನಿ ಉಂಟು ಮಾಡುತ್ತದೆ. ಈ ಸೊಳ್ಳೆ ಹಗಲಿನಲ್ಲಿಯೇ ಕಡಿಯುತ್ತದೆ.
ಲಕ್ಷಣಗಳೇನು?
ಡೆಂಗ್ಯೂ ಬಾಧಿತರಲ್ಲಿ ತತ್ಕ್ಷಣಕ್ಕೆ ಯಾವುದೇ ರೋಗ ಲಕ್ಷಣ ಹೆಚ್ಚಾಗಿ ಕಂಡುಬರುವುದಿಲ್ಲ. 7 ದಿನಗಳ ಬಳಿಕ ಒಂದೊಂದೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ತಲೆನೋವು, ಮೈ ಕೈ ನೋವು, ಕೀಲು ನೋವು, ವಾಕರಿಕೆ, ವಾತ, ತುರಿಕೆ, ಕಣ್ಣುಗಳ ಹಿಂಭಾಗ ನೋವು, ದೇಹದ ಅಲ್ಲಲ್ಲಿ ಕಲೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.
ಏನು ಮಾಡಬೇಕು?
ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ಜ್ವರ ಬಾಧಿತರು ತಣ್ಣೀರನ್ನು ಕುಡಿಯಲೇಬಾರದು. ಸ್ನಾನಕ್ಕೂ ಬಿಸಿನೀರನ್ನೇ ಬಳಸಿ. ತಲೆ ಸ್ನಾನದಿಂದ ಶೀತ ಅಧಿಕವಾಗಿ ಜ್ವರ, ತಲೆನೋವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜ್ವರ ಕಡಿಮೆಯಾಗುವವರೆಗೆ ತಲೆ ಸ್ನಾನ ಮಾಡದಿರುವುದೇ ಉತ್ತಮ ಎನ್ನುತ್ತಾರೆ ವೈದ್ಯರು.
ಮುನ್ನೆಚ್ಚರಿಕೆ ಕ್ರಮಗಳು
*ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಜನರೇ ಜಾಗೃತರಾಗಬೇಕಿದೆ.
*ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
*ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಬೇಕು.
*ಕಿಟಕಿಗಳನ್ನು ಮುಚ್ಚಿ, ಕಿಟಕಿಗೆ ಸೊಳ್ಳೆ ಪರದೆ ಅಳವಡಿಸಬೇಕು.
*ನೀರಿನ ಸಂಗ್ರಹಕ್ಕೆ ಭದ್ರವಾದ ಮುಚ್ಚಿದ ವ್ಯವಸ್ಥೆ ಇರಬೇಕು, ಟಯರ್, ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಬೇಕು.
*ತೊಟ್ಟಿ, ಡ್ರಮ್ಗಳಲ್ಲಿ 2ರಿಂದ 3 ದಿನಗಳಿಗೊಮ್ಮೆ ನೀರು ಬದಲಾಯಿಸಿ ಸ್ವಚ್ಚಗೊಳಿಸಿ.