ಭಾರತದ ರಾಷ್ಟ್ರೀಯ ಪ್ರಾಣಿ ಬದಲಾವಣೆ ಮಾಡುವ ಬಗ್ಗೆ ಸರ್ಕಾರ ಯೋಚಿಸುತ್ತಿದೆಯೇ? ಈ ಬಗ್ಗೆ ಸಂಸತ್ ನಲ್ಲಿಯೇ ಪ್ರಶ್ನೆಯೇ ಕೇಳಲಾಗಿದೆ.
ಬಿಜೆಪಿ ಸಂಸದರೊಬ್ಬರು ಸಂಸತ್ ನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಗುರುತಿಸುವ ಬಗ್ಗೆ ಯೋಚನೆಯಿದೆಯೇ ಎಂದು ಕೇಳಿದ್ದಾರೆ.
ಅಜ್ಮೀರ್ ಸಂಸದ ಭಾಗೀರಥ್ ಚೌಧರಿ ಅವರು ಸೋಮವಾರ ಸಂಸತ್ತಿನ ಕೆಳಮನೆಯಲ್ಲಿ ಲಿಖಿತ ಪ್ರಶ್ನೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವರಿಗೆ ಈ ಪ್ರಶ್ನೆಯನ್ನು ಕೇಳಿದರು, ಇದಕ್ಕೆ ಯಾವುದೇ ನೇರ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ.
ಸಂಸತ್ತಿನಲ್ಲಿ ಶಾಸನವನ್ನು ತರುವ ಮೂಲಕ ಭಾರತೀಯ ಮತ್ತು ಸನಾತನ ಸಂಸ್ಕೃತಿಯ ರಕ್ಷಣೆ ಮತ್ತು ಪುನರುಜ್ಜೀವನವನ್ನು ಪರಿಗಣಿಸಿ, ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಗುರುತಿಸಲು ಸರ್ಕಾರ ಉದ್ದೇಶಿಸಿದೆಯೇ ಎಂಬುದನ್ನೂ ಒಳಗೊಂಡಂತೆ ಅವರು ಹಲವಾರು ಪ್ರಶ್ನೆಗಳನ್ನು ಕೇಳಿದರು.
ಇದಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಉತ್ತರಿಸಿ, ಪಶುಸಂಗೋಪನಾ ಇಲಾಖೆಯು ತಿಳಿಸುವಂತೆ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸಕಾಂಗ ಅಧಿಕಾರಗಳ ವಿತರಣೆಯ ಅಡಿಯಲ್ಲಿ, (ಸಂವಿಧಾನದ 246 (3) ವಿಧಿ) ಪ್ರಾಣಿಗಳ ಸಂರಕ್ಷಣೆಯು ರಾಜ್ಯ ಶಾಸಕಾಂಗವು ಶಾಸನ ಮಾಡಲು ವಿಶೇಷ ಅಧಿಕಾರವನ್ನು ಹೊಂದಿರುವ ವಿಷಯವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿದ ಪ್ರಯತ್ನಗಳಿಗೆ ಪೂರಕವಾಗಿ ಮತ್ತು ಪ್ರೇರಕವಾಗಿ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಸ್ಥಳೀಯ ತಳಿಯ ಜಾನುವಾರು ಸೇರಿದಂತೆ ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ರಾಷ್ಟ್ರೀಯ ಗೋಕುಲ ಮಿಷನ್ ಅನ್ನು ಅನುಷ್ಠಾನಗೊಳಿಸುತ್ತಿದೆ. ಇಲಾಖೆಯು ಹಸು ಮತ್ತು ಅದರ ಸಂತತಿ ಸೇರಿದಂತೆ ಪ್ರಾಣಿಗಳನ್ನು ರಕ್ಷಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸಹ ಸ್ಥಾಪಿಸಿದೆ ಎಂದು ಅವರು ಹೇಳಿದರು.
ಹುಲಿಯು ಭಾರತದ ರಾಷ್ಟ್ರೀಯ ಪ್ರಾಣಿ ಮತ್ತು ನವಿಲು ರಾಷ್ಟ್ರೀಯ ಪಕ್ಷಿ ಆಗಿದೆ ಎಂದು ಅವರು ಉತ್ತರದಲ್ಲಿ ಹೇಳಿದ್ದಾರೆ.