ಉಜಿರೆ: ಸಾತ್ವಿಕ ವ್ಯಕ್ತಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಮುನ್ನುಗ್ಗಬೇಕು. ಜೀವನದ ಪಾಠದಲ್ಲಿ ಅತ್ಯವಶ್ಯಕವಾಗಿ ಉತ್ತೀರ್ಣರಾಗಬೇಕು. ಋಣಾತ್ಮಕ ವಿಷಯ ಬಿಟ್ಟು ಧನಾತ್ಮಕ ಅಂಶಗಳ ಕಡೆ ಮುಖಮಾಡಬೇಕು. ಮಾದಕ ಪದಾರ್ಥಳಿಂದ ಶರೀರದ ಅಂಗಾಂಗಗಳು ಕೆಟ್ಟು ಹೋಗುತ್ತವೆ ಹಾಗೂ ವಿಷಮಯವಾಗುತ್ತವೆ. ಯುವಕ ಯುವತಿಯರು ಮಾದಕ ಪದಾರ್ಥಗಳ ಆಕರ್ಷಣೆಯಿಂದ ಹೊರಬರಬೇಕು. ಒಟ್ಟಾರೆ ಸ್ವಸ್ಥ ಸಮಾಜ ನಿರ್ಮಾಣ ಆಗಬೇಕು ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿವೇಕ್ ವಿ ಪಾಯಸ್ ಅವರು ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಹಿಂದಿ ಮತ್ತು ಸಂಸ್ಕೃತ ಭಾಷಾ ವಿಭಾಗಗಳ ವತಿಯಿಂದ ನಡೆದ ಮಾದಕ ದ್ರವ್ಯಗಳ ದುಷ್ಪರಿಣಾಮದ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ದೃಷ್ಟಿಯಂತೆ ಸೃಷ್ಠಿ, ಧ್ವನಿಯಂತೆ ಪ್ರತಿಧ್ವನಿ, ಕ್ರಿಯೆಯಂತೆ ಪ್ರತಿಕ್ರಿಯೆ ಇರುವುದರಿಂದ ಒಳ್ಳೆಯ ಆಹಾರ ಕ್ರಮ ಮಾತ್ರ ಶರೀರಕ್ಕೆ ಬಲ ಕೊಡುತ್ತದೆ ಹೊರತು ಕೆಟ್ಟ ಪದಾರ್ಥ ಅಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಕರು ದೇಶದ ಅಭಿವೃದ್ಧಿಗೆ ಪೂರಕವಾಗಿ ಇರಬೇಕು. ಹದಿಹರೆಯದ ಯುವಕ ಯುವತಿಯರು ಕೆಟ್ಟ ವ್ಯಸನಗಳಿಂದ ಹೊರಬರಬೇಕು. ಧನಾತ್ಮಕ ಗುರಿಗೆ ತಯಾರಾಗಬೇಕು ಎಂದು ಕರೆ ನೀಡಿದರು.
ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ರಚಿಸಿದ ಭಿತ್ತಿ ಪತ್ರಿಕೆಯನ್ನು ಪ್ರಾಚಾರ್ಯರು ಬಿಡುಗಡೆಗೊಳಿಸಿದರು.
ಹಿಂದಿ ಭಾಷಾ ವಿಭಾಗದ ಮುಖ್ಯಸ್ಥ ನಾಗರಾಜ್ ಭಂಡಾರಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್, ಹಿಂದಿ ಉಪನ್ಯಾಸಕಿ ಫ್ಲೇವಿಯಾ ಪೌಲ್, ರಾ. ಸೇ ಯೋಜನೆಯ ಘಟಕದ ನಾಯಕಿ ದಕ್ಷಾ ಉಪಸ್ಥಿತರಿದ್ದರು.
ಘಟಕದ ನಾಯಕ ಸುದರ್ಶನ ನಾಯಕ್ ಸ್ವಾಗತಿಸಿ, ಚಾರಿತ್ರ್ಯ ಜೈನ್ ವಂದಿಸಿದರು. ಮಹಾಲಕ್ಷ್ಮೀ ನಿರೂಪಿಸಿದರು.