ಬೆಳ್ತಂಗಡಿ:ಧರ್ಮಸ್ಥಳ ಕನ್ಯಾಡಿ ಗ್ರಾಮದ ದಿ| ಪಿ.ಗಣಪತಿ ರಾವ್ ಹಾಗೂ ಲಕ್ಷ್ಮೀ ದಂಪತಿಯ ಪುತ್ರ ಪಣಿಯಾಡಿ ವಾಸುದೇವ ರಾವ್ ಇಸ್ರೋದಲ್ಲಿ ಹಿರಿಯ ವಿಜ್ಞಾನಿ. ಚಂದ್ರಯಾನದ ಉಪಗ್ರಹ ಹೊತ್ತೂಯ್ಯಲು ಎಲ್‌ವಿಎಂ-3 ಮತ್ತು ಎಲ್110-10 ಎಂಬ ರಾಕೆಟ್‌ಗಳಿದ್ದು, ಈ ಪೈಕಿ ಇಂಧನ ಹಾಗೂ ಆಕ್ಸಿಜನ್ ಹೊತ್ತೂಯ್ಯುವ ಪ್ರಥಮ ಸ್ಟೇಜ್ ಎಲ್110-10ನ್ನು ತಯಾರಿ ಹಾಗೂ ಪರೀಕ್ಷೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಿಡಿ ಭಾಗವನ್ನು ಬೆಂಗಳೂರು ಎಚ್ ಎ ಎಲ್‌ನಲ್ಲಿ ಸಿದ್ಧಪಡಿಸಿ ಇಸ್ರೋದ ತಿರುವನಂತಪುರದಲ್ಲಿ ಇರುವ ಮಹೇಂದ್ರಗಿರಿಗೆ ಕಳುಹಿಸಿಕೊಡುವ ವರೆಗಿನ ಕಾರ್ಯವನ್ನು ತನ್ನ ತಂಡದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದಲ್ಲಿ, ಉಜಿರೆ ಎಸ್‌ಡಿಎಂನಲ್ಲಿ ಪಿಯುಸಿ ಬಳಿಕ ಮಂಗಳೂರು ಕೆಪಿಟಿ ಯಲ್ಲಿ ಡಿಪ್ಲೊಮಾ ರಾಜ್ಯಕ್ಕೆ 4ನೇ ರ್‍ಯಾಂಕ್), ಮಂಡ್ಯ ಡಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ (ರಾಜ್ಯಕ್ಕೆ 6ನೇ) ರ್‍ಯಾಂಕ್ ಪಡೆದು ಇಸ್ರೋದ ತ್ರಿವೆಂಡ್ರಮ್‌ನಲ್ಲಿರುವ ಮಹೇಂದ್ರ ಗಿರಿಗೆ ನೇಮಕಗೊಂಡಿದ್ದರು. ಇಸ್ರೋದಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದು 2024 ಆಗಸ್ಟ್‌ಗೆ ನಿವೃತ್ತರಾಗಲಿದ್ದಾರೆ. ಪತ್ನಿ ಕಾವೇರಿ ಹಾಗೂ ಎಂಜಿನಿಯರ್ ಪದವಿ ಪೂರ್ಣಗೊಳಿಸಿದ ಮೂವರು ಪುತ್ರರೊಂದಿಗೆ ಬೆಂಗಳೂರಿನಲ್ಲಿದ್ದಾರೆ.