ಜೀವನ ಸಾಗಿಸಲು ಮನುಷ್ಯ ನಾನಾ ತರದ ವೇಷಗಳನ್ನು ಹಾಕುತ್ತಾನೆ. ಕುಟುಂಬದೊಳಗೆ ಒಂದು ವೇಷ, ಸಮಾಜದಲ್ಲಿ ಬೇರೆಯೇ ಒಂದು ವೇಷ. ಹೀಗೆ ಹಲವು ಪಾತ್ರಗಳನ್ನು ನಿರ್ವಹಣೆ ಮಾಡುತ್ತಾನೆ. ಈ ಎಲ್ಲಾ ವೇಷಗಳು ಬದುಕಿಗಾಗಿ.. ಹೊಟ್ಟೆಗಾಗಿ ಆಗಿರುತ್ತದೆ.
ಹೌದು. ಉಡುಪಿ (Udupi) ಜಿಲ್ಲೆ ಕಾಪು ತಾಲೂಕಿನ ರವಿ ಕಟಪಾಡಿ ಅವರು ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ವಿಭಿನ್ನ ವೇಷಗಳನ್ನು ತೊಡುತ್ತಾರೆ. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ವಿಭಿನ್ನ ವೇಷಭೂಷಣ ತೊಟ್ಟು ಅಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸ ದಿನ ಒಂದು ಉದ್ದೇಶ ಇಟ್ಟುಕೊಂಡು ಜನರ ಮಧ್ಯೆ ಹೋಗುತ್ತಾರೆ. ರವಿ ಹಾಕುವ ವೇಷ ಸ್ವಂತಕ್ಕಲ್ಲ, ಪರರ ಹಿತಕ್ಕಾಗಿ ಹಾಗೂ ಕಷ್ಟದ ಪರಿಹಾರಕ್ಕಾಗಿ ಆಗಿರುತ್ತದೆ.
ರವಿ ಈವರೆಗೆ ಏಳು ವಿಭಿನ್ನ ವೇಷಗಳನ್ನು ತೊಟ್ಟಿದ್ದು ಒಂದು ಕೋಟಿ ಹದಿಮೂರು ಲಕ್ಷ 70 ಸಾವಿರ ರುಪಾಯಿ ಜನರಿಂದ ಸಂಗ್ರಹಿಸಿದ್ದಾರೆ. ಒಂದು ರೂಪಾಯಿ ಸ್ವಂತ ಖರ್ಚಿಗೆ ಇಟ್ಟುಕೊಳ್ಳದ ರವಿ, ಎಲ್ಲವನ್ನೂ 113 ಅನಾರೋಗ್ಯ ಪೀಡಿತ ಕುಟುಂಬಗಳಿಗೆ ದಾನ ಮಾಡಿದ್ದಾರೆ. ಈ ಬಾರಿ ಮತ್ತೊಂದು ವಿಭಿನ್ನ ವೇಷದ ಮುಂದೆ ಪ್ರತ್ಯಕ್ಷ ಆಗಲಿದ್ದಾರೆ.
ಸಮಾಜ ಸೇವೆ ಮಾಡಿ ನೊಂದವರ ಮುಖದಲ್ಲಿ ನಗು ಮೂಡಿಸಿದ ರವಿ ಮನಸ್ಸಿಗೆ ಈ ಬಾರಿ ನೋವಾಗಿದೆ. ವೇಷ ಹಾಕಿ ಸಂಗ್ರಹಿಸಿದ ಹಣದಿಂದ ಕೋಟಿ ರೂಪಾಯಿಯ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ ಎಂದು ಕೆಲವರು ಕುಹಕವಾಡಿದ್ದಾರೆ. ಈ ಬಾರಿ ನಾನು ವೇಷ ಹಾಕುವುದಿಲ್ಲ ಎಂದು ರವಿ ನಿರ್ಧರಿಸಿದ್ದರು. ರವಿ ಫ್ರೆಂಡ್ಸ್ ಮೀಟಿಂಗ್ ಮಾಡಿ ಊರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಮ್ಮ ಕೆಲಸ ನಾವು ಮಾಡೋಣ ಎಂದು ಈ ಬಾರಿಯೂ ವೇಷ ಹಾಕಲು ನಿರ್ಧರಿಸಿದ್ದಾರೆ.
ನಮ್ಮ ಪಬ್ಲಿಕ್ ಹೀರೋ ರವಿ ಕಟಪಾಡಿ ಈ ಬಾರಿ ಸೀ ಫೋಕ್ (Sea Folk) ಎಂಬ ಹಾಲಿವುಡ್ ಮೂವಿಯ ಒಂದು ಫಿಕ್ಷನ್ ಪಾತ್ರವನ್ನು ಹೋಲುವ ವೇಷ ಹಾಕಲಿದ್ದಾರೆ. ಕುಂದಾಪುರ ಮೂಲದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡು ವರ್ಷದ ಮಗುವಿಗೆ ರವಿ ಸಹಾಯ ಮಾಡುವ ಮಾತು ನೀಡಿದ್ದಾರೆ. ಚಿಕಿತ್ಸೆಗೆ 15 ಲಕ್ಷ ರೂಪಾಯಿ ಬೇಕಾಗಿದ್ದು, ರವಿ ತನ್ನ ಕೈಲಾದ ಸಹಾಯ ಮಾಡಲಿದ್ದಾರೆ.