ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಣ್ಣುಕಾಯಿ ಮಾರಾಟದ ಅಂಗಡಿ ಮರು ಏಲಂಗೆ ಆದೇಶ

ಶೇರ್ ಮಾಡಿ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಣ್ಣುಕಾಯಿ, ಹರಕೆ ವಸ್ತುಗಳ ಮಾರಾಟದ ಅಂಗಡಿಗಳನ್ನು ಮರು ಏಲಂ ನಡೆಸಲು ಹೈಕೋರ್ಟ್‌ ಆದೇಶಿಸಿದೆ.
 
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ ಹಣ್ಣುಕಾಯಿ, ಚಿನ್ನ, ಬೆಳ್ಳಿ ಹರಕೆ ವಸ್ತುಗಳ ಮಾರಾಟದ ಅಂಗಡಿ, ಆದಿಸುಬ್ರಹ್ಮಣ್ಯದ ಹಣ್ಣುಕಾಯಿ ಅಂಗಡಿಗಳನ್ನು ಗುರುಪಾದ, ವಿಜಯ ಕುಮಾರ್‌ ಮತ್ತು ಕಾರ್ತಿಕ್‌ ಅವರು ಒಂದು ವರ್ಷದ ಅವಧಿಗೆ ಹರಾಜಿನಲ್ಲಿ ಪಡೆಕೊಂಡಿದ್ದರು. ಕರಾರುಪತ್ರದ ಅವಧಿ ಕಳೆದ ಎಪ್ರಿಲ್‌ಗೆ ಕೊನೆಗೊಂಡಿದ್ದರೂ ಚುನಾವಣೆಯ ನೀತಿಸಂಹಿತೆ ಕಾರಣದಿಂದ ಮರುಹರಾಜು ಸಾಧ್ಯವಾಗಿರಲಿಲ್ಲ.
 
ಈ ಮಧ್ಯೆ ಅಂಗಡಿಗಳನ್ನು 4 ವರ್ಷಗಳ ಅವಧಿಗೆ ಮುಂದುವರಿಸಿ ನೀಡಬೇಕೆಂದು ಗುತ್ತಿಗೆದಾರರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮಾಸ್ಟರ್‌ ಪ್ಲಾನ್‌ ಕಾಮಗಾರಿ ನಡೆಯಲಿರುವ ಕಾರಣ ಗುತ್ತಿಗೆ ಅವಧಿ ಮುಂದುವರಿಸಲು ಸಾಧ್ಯವಿಲ್ಲವೆಂದು ಹಿಂಬರಹ ನೀಡಿದ ಸರಕಾರದ ಕಾರ್ಯದರ್ಶಿಯವರು ಗುತ್ತಿಗೆದಾರರ ಅರ್ಜಿಗಳನ್ನು ತಿರಸ್ಕರಿಸಿ ಆದೇಶ ನೀಡಿದ್ದರು.
ಆದೇಶವನ್ನು ಪ್ರಶ್ನಿಸಿ ಗುತ್ತಿಗೆದಾರರು ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆ ಕೋರಿದ್ದರು. ಇದೇ ವೇಳೆ ಸುಬ್ರಹ್ಮಣ್ಯದ ಗ್ರಾ.ಪಂ. ಸದಸ್ಯ ಹಾಗೂ ಕಾಂಗ್ರೆಸ್‌ ಗ್ರಾಮ ಸಮಿತಿ ಅಧ್ಯಕ್ಷ ಹರೀಶ ಇಂಜಾಡಿ ಆ ಅಂಗಡಿಗಳನ್ನು ನಿಯಮ ಪ್ರಕಾರ ಏಲಂ ನಡೆಸಬೇಕೆಂದು ಕೋರಿ ಸರಕಾರಕ್ಕೆ ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.
ಪ್ರಕರಣವನ್ನು ಇತ್ಯರ್ಥಪಡಿಸಿದ ನ್ಯಾಯಾಲಯ ಗುತ್ತಿಗೆದಾರರ ಅರ್ಜಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿ ತತ್‌ಕ್ಷಣ ಅಂಗಡಿಗಳನ್ನು ತೆರವುಗೊಳಿಸಿ ಹರಾಜು ನಡೆಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದ್ದು ಅನಧಿಕೃತವಾಗಿ ವ್ಯಾಪಾರ ನಡೆಸಿದ ಮೂರೂವರೆ ತಿಂಗಳ ಬಾಡಿಗೆಗೆ ಶೇ.10 ದಂಡನೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
ದೇವಸ್ಥಾನದ ಪರವಾಗಿ ವೈಶಾಲಿ ಹೆಗ್ಡೆ ಹಾಗೂ ಹರೀಶ ಇಂಜಾಡಿ ಅವರ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಪರವಾಗಿ ಹೈಕೋರ್ಟಿನ ನ್ಯಾಯವಾದಿ ಪುತ್ತೂರಿನ ಸೂರ್ಯಂಬೈಲು ರಾಜಾರಾಮ್‌ ವಾದಿಸಿದ್ದರು.
 

Leave a Reply

error: Content is protected !!