ಭಾರತೀಯ ಚಲನಚಿತ್ರೋದ್ಯಮದಲ್ಲಿ ಶ್ರೀಮಂತ ದಂಪತಿಗಳಿದ್ದಾರೆ. ಸಿನಿಮಾದಲ್ಲಿ ನಟಿಸುವ ಜೊತೆಗೆ ತಮ್ಮದೇ ಸಂಸ್ಥೆ ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುವ ಹಲವು ದಂಪತಿಗಳು ನಮ್ಮ ಸಿನಿಮಾರಂಗದಲ್ಲಿದ್ದಾರೆ.
ಮುಖ್ಯವಾಗಿ ಬಾಲಿವುಡ್ ನಲ್ಲಿ ಶಾರುಖ್ ಮತ್ತು ಗೌರಿ ಖಾನ್, ಆದಿತ್ಯ ಚೋಪ್ರಾ ಮತ್ತು ರಾಣಿ ಮುಖರ್ಜಿ, ಮತ್ತು ಅಜಯ್ ದೇವಗನ್ ಮತ್ತು ಕಾಜೋಲ್ ದಂಪತಿಗಳು ನಟಿಸುವ ಜೊತೆಗೆ ಸಿನಿಮಾವನ್ನು ನಿರ್ಮಾಣ ಮಾಡಿಯೂ ಸೈ ಎನ್ನಿಸಿಕೊಂಡಿದ್ದಾರೆ.
ಆದರೆ ದಕ್ಷಿಣ ಭಾರತದಲ್ಲಿ ಈ ಮೇಲಿನ ಎಲ್ಲಾ ದಂಪತಿಗಳಿಗಿಂತ ಅತೀ ಹೆಚ್ಚು ಸಂಪತ್ತನ್ನು ಹೊಂದಿರುವ ಶ್ರೀಮಂತ ಸಿನಿಮಾ ನಿರ್ಮಾಣ ಮಾಡುವ ದಂಪತಿಯೊಂದಿದೆ. ಈ ದಂಪತಿ ಕಳೆದ 10 ವರ್ಷಗಳಿಂದ ಸಿನಿಮಾ ನಿರ್ಮಾಣದ ಜೊತೆಗೆ ಇತರ ವ್ಯವಹಾರದಲ್ಲಿ ತೊಡಗಿದಕೊಂಡು ಭಾರತೀಯ ಕಾರ್ಪೊರೇಟ್ ವಲಯದಲ್ಲಿಯೂ ಅತಿ ಹೆಚ್ಚು ಲಾಭಾಂಶ ಪಡೆದ ದಂಪತಿಗಳಲ್ಲಿ ಒಂದಾಗಿದ್ದಾರೆ.
ಸನ್ ಟಿವಿ ಮತ್ತು ಸನ್ ಪಿಕ್ಚರ್ಸ್‌ನ ಮಾಲಕರಾಗಿರುವ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಉದ್ಯಮಶೀಲ ದಂಪತಿಗಳಾಗಿದ್ದಾರೆ ಎಂದು ಝೀ ನ್ಯೂಸ್ ವರದಿ ತಿಳಿಸಿದೆ.
ಸಿನಿಮಾ ನಿರ್ಮಾಣ, ಕ್ರಿಕೆಟ್ ಟೀಮ್, ಟವಿ ಚಾನೆಲ್… ಆಸ್ತಿ ಎಷ್ಟು?:
ಮಾರನ್ ದಂಪತಿ ಎಷ್ಟು ಶ್ರೀಮಂತರೆಂದರೆ ಕಳೆದ ಒಂದು ದಶಕದಲ್ಲಿ 1500 ಕೋಟಿ ರೂಪಾಯಿಯ ವ್ಯವಹಾರದ ಲಾಭವನ್ನು ಪಡೆದಿದ್ದಾರೆ. ಇದು ಅಂಬಾನಿ ದಂಪತಿಗಳಿಸಿದ್ದಕ್ಕಿಂತ ಹೆಚ್ಚು ಎನ್ನುವುದು ವಿಶೇಷ. ಸಿನಿಮಾರಂಗದಲ್ಲಿ ಇಷ್ಟು ದೊಡ್ಡಮಟ್ಟದ ಲಾಭವನ್ನು ಬೇರೆ ಯಾವ ದಂಪತಿಯೂ ಮಾಡಿಲ್ಲ. ಮಾರನ್ ಕುಟುಂಬವು ಸನ್ ಟಿವಿಯಲ್ಲಿ 75% ಪಾಲನ್ನು ಹೊಂದಿದೆ. ಸನ್ ಪಿಕ್ಚರ್ಸ್ 6 ಭಾಷೆಗಳಲ್ಲಿ ಒಟ್ಟು 33 ಚಾನೆಲ್ ಗಳನ್ನು ಹೊಂದಿದೆ. ಇದರಲ್ಲಿ ಸನ್ NXT OTT, ಐಪಿಎಲ್ ತಂಡವಾದ ಸನ್‌ರೈಸರ್ಸ್ ಹೈದರಾಬಾದ್ ಕೂಡ ಇದೆ. ಫೋರ್ಬ್ಸ್ ಪ್ರಕಾರ, ಕಲಾನಿಧಿ ಮಾರನ್ ಅವರ ಒಟ್ಟು ಆಸ್ತಿಯ ನಿವ್ವಳ ಮೌಲ್ಯ $3 ಬಿಲಿಯನ್ (ರೂ. 25000 ಕೋಟಿಗಿಂತ ಹೆಚ್ಚು) ಇದೆ. ಇವರು ಭಾರತದ ಶ್ರೀಮಂತ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು.
ಸಿನಿಮಾಗಳಿಂದಲೇ ಕೋಟಿ ಕೋಟಿ ಗಳಿಕೆ.
ಸನ್ ಪಿಕ್ಚರ್ಸ್ ಇತ್ತೀಚೆಗೆ ‘ಜೈಲರ್ʼ ಸಿನಿಮಾವನ್ನು ನಿರ್ಮಾಣ ಮಾಡಿದೆ. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 600 ಕೋಟಿಗೂ ಹೆಚ್ಚು ಅಧಿಕ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಕಲಾನಿಧಿ ಮಾರನ್, ರಜಿನಿಕಾಂತ್ ಅವರಿಗೆ 100 ಕೋಟಿ ಚೆಕ್ ಹಾಗೂ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗೂ ಇದೇ ರೀತಿಯ ಉಡುಗೊರೆಯನ್ನು ಅವರು ನೀಡಿದ್ದಾರೆ.
ಸಿನಿಮಾರಂಗಕ್ಕೆ ಬಂದರೆ ಸನ್ ಪಿಕ್ಚರ್ಸ್ ಮೊದಲು ಸಿನಿಮಾ ನಿರ್ಮಾಣ ಮಾಡಿದ್ದು, 1999 ರಲ್ಲಿ ಬಂದ ‘ಸಿರಗುಗಲ್’ ಸಿನಿಮಾವನ್ನು ಆ ಬಳಿಕ ಒಂದು ದಶಕ ಯಾವ ಸಿನಿಮಾವನ್ನು ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಆ ಬಳಿಕ 2010 ರಲ್ಲಿ ರಜಿನಿಕಾಂತ್ ಅವರ ʼಎಂದಿರನ್ʼ (ರೋಬೋ) ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಕೋಟಿ ಕೋಟಿ ಲಾಭ ತಂದುಕೊಟ್ಟಿತ್ತು. ಇದಾದ ಬಳಿಕ ರಜಿನಿಕಾಂತ್ ಅವರೇ ಅಭಿನಯಿಸಿರುವ ‘ಸರ್ಕಾರ್’, ‘ಪೆಟ್ಟಾ’ ದಂತಹ ಸಿನಿಮಾವನ್ನು ನಿರ್ಮಾಣ ಮಾಡಿ ಲಾಭದ ವಹಿವಾಟು ಮಾಡಿದ್ದರು.
ರಾಘವ ಲಾರೆನ್ಸ್ ಅವರ ‘ಕಾಂಚನ 3’, ದಳಪತಿ ವಿಜಯ್ ಅವರ ‘ಬೀಸ್ಟ್’ ಧನುಷ್ ಅಭಿನಯದ ‘ತಿರುಚಿತ್ರಂಬಲಂ’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿ ಯಶಸ್ವಿ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡದೆ.