ಕೇರಳದಲ್ಲಿ ನಿಫಾ ದೃಢ; ದ.ಕ. ಜಿಲ್ಲೆಯಲ್ಲಿ ವಿಶೇಷ ನಿಗಾ

ಶೇರ್ ಮಾಡಿ

ಕೇರಳದಲ್ಲಿ ನಿಫಾ ವೈರಸ್ ದೃಢಪಟ್ಟಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿ ವಿಶೇಷ ನಿಗಾ ಇಡಲಾಗಿದೆ.

ಜಿಲ್ಲೆಯಲ್ಲಿ ಜ್ವರ ಸಮೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದ್ದು, ವೆನ್ಲಾಕ್ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಿಫಾ ಐಸೋಲೇಶನ್ ವಾರ್ಡ್ ಮೀಸಲಿಗೆ ಸೂಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ಡಾ. ಸುದರ್ಶನ್ ಹೇಳಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರೈನ್ ಫೀವರ್, ನಿಫಾ ಲಕ್ಷಣ ಕಂಡುಬಂದರೆ ಸೂಚನೆ ನೀಡುವಂತೆ ಖಾಸಗಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿಗೂ ನಿರ್ದೇಶನ‌ ನೀಡಲಾಗಿದೆ.

ದ.ಕ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ನಿಫಾ ವೈರಸ್ ಪ್ರಕರಣ ದೃಢಪಟ್ಟಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಔಷಧ ಕೊರತೆ ಇಲ್ಲ. ನಿಫಾ ವೈರಸ್ ಲಕ್ಷಣ ಕಂಡು‌ ಬಂದರೆ ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದರು.

Leave a Reply

error: Content is protected !!