ಅತ್ತ ಕಾಸಿಗಾಗಿ ಟಿಕೆಟ್ ಲಾಲಸೆ ತೋರಿ ಉದ್ಯಮಿಯಿಂದ ಐದಾರು ಕೋಟಿ ಪೀಕಿರುವ ಮಿಸ್ ಚೈತ್ರಾ ಕುಂದಾಪುರ ಟೀಮ್ ಆರೋಪ ಹೊರಬೀಳುತ್ತಿದ್ದಂತೆ ಅದೇ ತಂಡದಲ್ಲಿದ್ದ ಅಭಿನವ ಹಾಲಶ್ರೀ ಸ್ವಾಮೀಜಿ, ತನ್ನದೇ ಪ್ರತ್ಯೇಕ ಪ್ರಯತ್ನದಲ್ಲಿ ಮತ್ತೊಬ್ಬ ಮಿಕಕ್ಕೆ ಗಾಳ ಹಾಕಿ 1 ಕೋಟಿ ರೂಪಾಯಿ ವಂಚಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಹೌದು, ಎಸ್ ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದ ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯ್ತಿ ಪಿಡಿಒ ಸಂಜಯ್ ಚವಡಾಳ ಎಂಬಾತ ಇದೀಗ ಹಾಲಶ್ರೀ ವಿರುದ್ಧ ವಂಚನೆ ಆರೋಪ ಹೊರಿಸಿ, ಮುಂಡರಗಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಅರುಂಧತಿ ಫೌಂಡೇಷನ್ ಹೆಸರಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಜಯ್ ಚವಡಾಳ, ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರು.
ಅಂದಹಾಗೆ, ಕರ್ತವ್ಯ ಲೋಪದ ಆರೋಪದಲ್ಲಿ ಸಂಜಯ್ ಸದ್ಯ ಅಮಾನತುಗೊಂಡಿದ್ದಾರೆ. ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಂತಾ ಬಿಂಬಿಸಿಕೊಂಡಿದ್ದ ಸಂಜಯ್, ಚುನಾವಣೆಗೆ ಮುಂಚಿತವಾಗಿ 1 ಕೋಟಿ ರೂಪಾಯಿ ಹಣವನ್ನ ಶ್ರೀಗಳಿಗೆ ನೀಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆ.19ನೇ ತಾರೀಕು ಮಧ್ಯರಾತ್ರಿ ಠಾಣೆಗೆ ಬಂದು ಸಂಜಯ್ ದೂರು ನೀಡಿದ್ದಾರೆ.
ಮೂರು ಹಂತದಲ್ಲಿ ಹಣ ನೀಡಿದ್ದಾಗಿ ದೂರಿನಲ್ಲಿ ದಾಖಲಿಸಿರುವ ಬಗ್ಗೆ ಮಾಹಿತಿಯಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ಮುಂಡರಗಿ ಪೊಲೀಸರು ಕೇವಲ ಎನ್ ಸಿ ದಾಖಲಿಸಿ ಕಳುಹಿಸಿದ್ದಾರೆ. ಸಸ್ಪೆಂಡ್ ಆಗಿರುವ ಪಿಡಿಒ ಸಂಜಯ್ ಚವಡಾಳಗೆ ಸಮರ್ಪಕ ದಾಖಲೆ ತೆಗೆದುಕೊಂಡು ಬರುವಂತೆ ಮುಂಡರಗಿ ಪೊಲೀಸರು ಸೂಚಿಸಿದ್ದಾರೆ. ಪಿಟಿಷನ್ ದಾಖಲಿಸಿಕೊಂಡು, ಮುಂಡರಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತ ಸಂಜಯ್, ದೂರು ನೀಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಗದಗ ಎಸ್ಪಿ ಬಿ ಎಸ್ ನೇಮಗೌಡ ಹೇಳಿಕೆ:
ಅಸೆಂಬ್ಲಿ ಟಿಕೆಟ್ಗಾಗಿ ಹಣ ಪಡೆದು ವಂಚಿಸಿರುವ ಅಭಿನವ ಹಾಲಶ್ರೀ ವಿರುದ್ಧ ಮತ್ತೊಂದು ದೂರು ದಾಖಲಾದ ಹಿನ್ನೆಲೆಯಲ್ಲಿ ದೂರು ನೀಡಿದ ಪಿಡಿಓ ಸಂಜಯ ಚವಡಾಳಗೆ ಗದಗ ಪೊಲೀಸರು ನೋಟಿಸ್ ನೀಡಿದ್ದು, ಹಣ ನೀಡಿದ ಬಗ್ಗೆ ದಾಖಲೆ ಒದಗಿಸುವಂತೆ ಸೂಚಿಸಿದ್ದಾರೆ.
ಸಂಜಯ ಚವಡಾಳ ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿದ್ದೇವೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೇಳಿದ್ದ ಸಂಜಯ್, ವಿವಿಧ ಹಂತದಲ್ಲಿ ನಗದು ರೂಪದಲ್ಲಿ ಹಣವನ್ನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಸಂಜಯ್ ಚವಡಾಳಗೆ ನೋಟಿಸ್ ಸಹ ಕೊಟ್ಟಿದೇವೆ. ಸಮಂಜಸ ದಾಖಲೆಗಳನ್ನ ಪೊಲೀಸರಿಗೆ ಸಲ್ಲಿಸುವಂತೆ ನೋಟಿಸ್ ಕೊಟ್ಟಿದೇವೆ. ಇದುವರೆವಿಗೂ ಯಾವುದೇ ದಾಖಲೆಯನ್ನು ದೂರುದಾರರು ನಮಗೆ ಕೊಟ್ಟಿಲ್ಲ. ದಾಖಲೆಗಳನ್ನ ಕೊಟ್ಟ ಮೇಲೆ ಮುಂದಿನ ತನಿಖೆ ಆರಂಭಿಸುತ್ತೇವೆ ಎಂದು ಎಸ್ಪಿ ನೇಮಗೌಡ ಹೇಳಿದ್ದಾರೆ.