Ind vs Aus: ಬೆಂಕಿ ಬ್ಯಾಟಿಂಗ್‌, ಮಿಂಚಿನ ಬೌಲಿಂಗ್‌; ಆಸೀಸ್‌ ವಿರುದ್ಧ ಭಾರತಕ್ಕೆ ಸರಣಿ ಜಯ

ಶೇರ್ ಮಾಡಿ

ಶ್ರೇಯಸ್‌ ಅಯ್ಯರ್‌, ಶುಭಮನ್‌ ಗಿಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಭರ್ಜರಿ ಬ್ಯಾಟಿಂಗ್‌ ಹಾಗೂ ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜಾ ಹಾಗೂ ಪ್ರಸಿದ್ಧ್‌ ಕೃಷ್ಣ ಮಿಂಚಿನ ಬೌಲಿಂಗ್‌ ದಾಳಿ ನೆರವಿನಿಂದ ಭಾರತ‌, ಆಸ್ಟ್ರೇಲಿಯಾ ವಿರುದ್ಧ 99 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನ 2-0 ಅಂತರದಲ್ಲಿ ಗೆದ್ದು ಸರಣಿ ಗೆದ್ದುಕೊಂಡಿದೆ.

ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 399 ರನ್‌ ಬಾರಿಸಿತ್ತು. 400 ರನ್‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾಕ್ಕೆ ಕೆಲಕಾಲ ಮಳೆ ಅಡ್ಡಿಯುಂಟು ಮಾಡಿತ್ತು. ಇದರಿಂದ ಡಕ್ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಆಸ್ಟ್ರೇಲಿಯಾಕ್ಕೆ 33 ಓವರ್‌ಗಳಲ್ಲಿ 317 ರನ್‌ಗಳ ಗುರಿ ನೀಡಲಾಯಿತು. ಇದರಿಂದ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಲು ಮುಂದಾದ ಆಸೀಸ್‌ ಬ್ಯಾಟರ್‌ಗಳು ಟೀಂ ಇಂಡಿಯಾ ಬೌಲಿಂಗ್‌ ದಾಳಿಗೆ ತುತ್ತಾದರು. ಅಂತಿಮವಾಗಿ ಆಸ್ಟ್ರೇಲಿಯಾ 28.2 ಓವರ್‌ಗಳಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡಿತು.

ಆಸೀಸ್‌ ಪರ ಆರಂಭಿಕನಾಗಿ ಕಣಕ್ಕಿಳಿದ ಡೇವಿಡ್‌ ವಾರ್ನರ್‌, ಕೊನೆಯಲ್ಲಿ ಸೀನ್‌ ಅಬಾಟ್‌ ಸ್ಪೋಟಕ ಆರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದೆಲ್ಲ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಕಳಪೆ ಪ್ರದರ್ಶನ ನೀಡಿದರು. ಡೇವಿಡ್‌ ವಾರ್ನರ್‌ 53 ರನ್‌ (39 ಎಸೆತ, 7 ಬೌಂಡರಿ, 1 ಸಿಕ್ಸರ್‌) ಗಳಿಸಿದ್ರೆ, ಅಬಾಟ್‌ 36 ಎಸೆತಗಳಲ್ಲಿ 54 ರನ್‌ (5‌ ಸಿಕ್ಸರ್‌, 4 ಬೌಂಡರಿ) ಚಚ್ಚಿದರು.

ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಬರೋಬ್ಬರಿ 55 ಬೌಂಡರಿ, 27 ಸಿಕ್ಸರ್‌ಗಳು ಸಿಡಿದವು. ಟೀಂ ಇಂಡಿಯಾ ಪರ 31 ಬೌಂಡರಿ, 18 ಸಿಕ್ಸರ್‌ಗಳು ದಾಖಲಾದರೆ, ಆಸ್ಟ್ರೇಲಿಯಾ ಪರ 24 ಬೌಂಡರಿ, 9 ಸಿಕ್ಸರ್‌ಗಳು ದಾಖಲಾದವು. ಟೀಂ ಇಂಡಿಯಾ ಪರ ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜಾ ತಲಾ 3 ವಿಕೆಟ್‌ ಕಿತ್ತರೆ, ಪ್ರಸಿದ್ಧ್‌ ಕೃಷ್ಣ 2 ವಿಕೆಟ್‌ ಹಾಗೂ ಮೊಹಮ್ಮದ್‌ ಶಮಿ 1 ವಿಕೆಟ್‌ ಪಡೆದು ತೃಪ್ತಿಪಟ್ಟುಕೊಂಡರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಯಿತು. ಆರಂಭಿಕ ಋತುರಾಜ್‌ ಗಾಯಕ್ವಾಡ್‌ 12 ಎಸೆತಗಳಲ್ಲಿ 8 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಶುಭಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಬರೋಬ್ಬರಿ 200 ರನ್‌ಗಳ ಜೊತೆಯಾಟ ನೀಡಿದರು. ಆಸೀಸ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗ ಬೆಂಡೆತ್ತಿದ ಈ ಜೋಡಿ 164 ಎಸೆತಗಳಲ್ಲಿ 200 ರನ್‌ಗಳ ಜೊತೆಯಾಟ ನೀಡಿತು. ಶ್ರೇಯಸ್‌ ಅಯ್ಯರ್‌ 90 ಎಸೆತಗಳಲ್ಲಿ 105 ರನ್‌ (11 ಬೌಂಡರಿ, 3 ಸಿಕ್ಸರ್‌) ಬಾರಿಸಿದ್ರೆ. ಶುಭಮನ್‌ ಗಿಲ್‌ 97 ಎಸೆತಗಳಲ್ಲಿ 104 ರನ್‌ (6 ಬೌಂಡರಿ, 4 ಸಿಕ್ಸರ್‌) ಚಚ್ಚಿದರು.

ನಂತರ ಕ್ರೀಸ್‌ಗಳಿದ ಟೀಂ ಇಂಡಿಯಾ ಬ್ಯಾಟರ್ಸ್‌ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. 136.84 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕೆ.ಎಲ್‌ ರಾಹುಲ್‌ 38 ಎಸೆತಗಳಲ್ಲಿ 52 ರನ್‌ (3 ಬೌಂಡರಿ, 3 ಸಿಕ್ಸರ್‌) ಚಚ್ಚಿದರೆ, 172.22 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಇಶಾನ್‌ ಕಿಶನ್‌ 18 ಎಸೆತಗಳಲ್ಲಿ 31 ರನ್‌ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು.

ಸೂರ್ಯ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ: ಕೊನೆಯಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ ಟಿ20 ಶೈಲಿಯಲ್ಲೇ ಬ್ಯಾಟಿಂಗ್‌ ಮಾಡುವ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿದರು. ಮೊದಲ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದ ಸೂರ್ಯ ಇಂದು 37 ಎಸೆತಗಳಲ್ಲಿ 72 ರನ್‌ (6 ಸಿಕ್ಸರ್‌, 6 ಬೌಂಡರಿ) ಬಾರಿಸುವ ಮೂಲಕ ಟೀಂ ಇಂಡಿಯಾ 400 ರನ್‌ಗಳ ಗುರಿ ನೀಡಲು ಸಾಧ್ಯವಾಯಿತು. ರವೀಂದ್ರ ಜಡೇಜಾ 9 ಎಸೆತಗಳಲ್ಲಿ 13 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ಆಸೀಸ್‌ ಪರ ಕ್ಯಾಮರೂನ್‌ ಗ್ರೀನ್‌ 2 ವಿಕೆಟ್‌ ಕಿತ್ತರೆ, ಜೋಶ್‌ ಹ್ಯಾಜಲ್‌ವುಡ್‌, ಸೇನ್‌ ಅಬ್ಬಾಟ್‌, ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದರು.

Leave a Reply

error: Content is protected !!