ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ಇದೇ ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್ಗೆ ಕರೆ ಕೊಡಲಾಗಿದೆ. ಇಂದು(ಸೆಪ್ಟೆಂಬರ್ 25) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಶುಕ್ರವಾರ ಕರ್ನಾಟಕ ಬಂದ್ಗೆ ತೀರ್ಮಾನಿಸಲಾಗಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಅಧಿಕೃತ ಘೋಷಣೆ ಮಾಡಿದ್ದು, ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ಸೆ.29ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಕಾವೇರಿ ನದಿ ನೀರು ಹಂಚಿಕೆ ವಿವಾದ, ಮಹದಾಯಿ ಯೋಜನೆ, ಕೃಷ್ಣಾನದಿ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ವಿಚಾರವಾಗಿ ಸೆ.29ರ ಕರ್ನಾಟಕ ಬಂದ್ಗೆ ಎಲ್ಲರೂ ಸಹಕಾರ ನೀಡಬೇಕು. ಅಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜನೆ ಮಾಡಲಾಗುತ್ತದೆ. ಟೌನ್ಹಾಲ್ನಿಂದ ಫ್ರೀಡಂಪಾರ್ಕ್ವರೆಗೂ ಪ್ರತಿಭಟನಾ ರ್ಯಾಲಿ ನಡೆಸುತ್ತೇವೆ ಎಂದು ವಿವರಿಸಿದರು.
ಸದ್ಯಕ್ಕೆ ಕರ್ನಾಟಕ ಬಂದ್ಗೆ ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ಬೆಂಬಲವನ್ನು ಘೋಷಿಸಿದ್ದಾರೆ. ಇನ್ನು ಇದಕ್ಕೆ ಕನ್ನಡಪರ ಸಂಘಟನೆಗಳು ಸಹ ಬೆಂಗಳೂರು ಬಂದ್ ಬದಲಾಗಿ ಕರ್ನಾಟಕ ಬಂದ್ಗೆ ಬೆಂಬಲ ನೀಡಿವೆ.
ಇನ್ನುಳಿದಂತೆ ಯಾವೆಲ್ಲ ಸಂಘ-ಸಂಸ್ಥೆಗಳು ಕರ್ನಾಟಕ ಬಂದ್ಗೆ ಬೆಂಬಲ ಘೋಷಿಸುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.