ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ಗಾಂಧಿ ಜಯಂತಿಯ ಆಚರಣೆ ನಡೆಯಿತು.
ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಗುಡ್ಡಪ್ಪ ಬಲ್ಯ ಮಾತನಾಡುತ್ತಾ “ಇವತ್ತು ನಾವು ಇಬ್ಬರು ಮಹಾತ್ಮರುಗಳ ಜನ್ಮದಿನವನ್ನು ಆಚರಿಸ್ತಾ ಇದ್ದೇವೆ. ಇಬ್ಬರೂ ಕೂಡ ಮಹತ್ತರ ಕೆಲಸಗಳನ್ನು ಮಾಡಿದ ಕಾರಣ ಆ ಆತ್ಮವನ್ನು ಮಹಾತ್ಮರನ್ನಾಗಿ ನಾವು ಕಾಣುತ್ತೇವೆ. ಮಹಾತ್ಮ ಗಾಂಧೀಜಿಯವರ ಬಗ್ಗೆ ಹೇಳುವುದಾದರೆ, ಅವರು ಅನೇಕ ಕಷ್ಟಗಳನ್ನ ಸಹಿಸಿಕೊಂಡು, ಬೇರೆ ಬೇರೆ ರಾಷ್ಟ್ರಗಳಲ್ಲಿ ಆದಂತಹ ಅನೇಕ ಅನುಭವಗಳ ಆಧಾರದ ಮೇಲೆ ನಮ್ಮ ರಾಷ್ಟ್ರವನ್ನು ಕಟ್ಟುವಂತಹ ಅಪೂರ್ವವಾದ ಕೆಲಸವನ್ನು ಮಾಡಿದ್ದಾರೆ ಮಹಾತ್ಮ ಗಾಂಧಿಜಿ. ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಯವರು ಕೂಡ ಬಾಲ್ಯದಲ್ಲಿ ಬಹಳಷ್ಟು ಕಷ್ಟಗಳನ್ನ ಅನುಭವಿಸಿ, ಅದನ್ನ ಮೆಟ್ಟಿ ನಿಲ್ಲಬೇಕು ಎಂಬುವಂತಹ ದೃಢ ಸಂಕಲ್ಪವನ್ನು ಮಾಡಿ ಶ್ರಮಿಸಿದ ಕಾರಣದಿಂದಲೇ ಅವರು ಪ್ರಧಾನಮಂತ್ರಿ ಹುದ್ದೆಗೆ ಏರಿದರು. ಪ್ರಧಾನಮಂತ್ರಿಯ ಆದಮೇಲೆ ಕೂಡ ರಾಷ್ಟ್ರದ ಕುರಿತಾಗಿ, ರಾಷ್ಟ್ರದ ಅಭಿವೃದ್ಧಿಯ ಕುರಿತಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಜೈ ಜವಾನ್ ಜೈ ಕಿಸಾನ್ ಎಂಬ ಅವರ ಘೋಷವಾಕ್ಯ ಬಹಳಷ್ಟು ಪ್ರಸಿದ್ಧವಾಗಿದೆ. ಅದಲ್ಲದೆ ಇಂದು ನಾವು ಸಂವಿಧಾನದ ಪೀಠಿಕೆಯನ್ನು ಕೂಡ ಪ್ರಾರಂಭದಲ್ಲಿ ಓದಿದ್ದೇವೆ. ಸಂವಿಧಾನದ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಂತಹ ಅಂಬೇಡ್ಕರ್ ಜೀ ಅವರನ್ನು ಕೂಡ ಸ್ಮರಿಸುವಂತಹ ಕೆಲಸವನ್ನು ನಾವು ಇವತ್ತು ಮಾಡಬೇಕು” ಎಂದು ಹೇಳಿದರು.
ಪ್ರೌಢಶಾಲೆಯ ಗುರುಗಳಾದ ದಿನೇಶ್ ಸಂವಿಧಾನದ ಪೀಠಿಕೆಯನ್ನು ಓದಿದರು. ಉಪನ್ಯಾಸಕರು ಎಲ್ಲರೂ ಕೂಡ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಪ್ರೌಢಶಾಲೆಯ ಮುಖ್ಯ ಗುರುಗಳಾದ ಸತೀಶ್ ಭಟ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ವಂದಿಸಿದರು. ವಿದ್ಯಾರ್ಥಿನಿಯರಾದ ಅನುಶ್ರೀ ಉಡುಪ ಮತ್ತು ಶ್ರೇಯ ಪ್ರಾರ್ಥಿಸಿದರು. ಉಪನ್ಯಾಸಕರಾದ ಚೇತನ್ ಎಂ ಕಾರ್ಯಕ್ರಮ ನಿರೂಪಿಸಿದರು.