ದೇಹದಾರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯ. ವಾಕಿಂಗ್ ಕೂಡ ಒಂದು ರೀತಿಯ ಚಟುವಟಿಕೆಯಾಗಿದ್ದು, ಇದು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಅನೇಕ ಜನರು ಮುಂಜಾನೆ ಅಥವಾ ಮುಸ್ಸಂಜೆ ವಾಕಿಂಗ್ ಹೋಗುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇದೇ ರೀತಿ ಇತ್ತೀಚಿನ ದಿನಗಳಲ್ಲಿ ‘ಸೈಲೆಂಟ್ ವಾಕಿಂಗ್ʼ ಕೂಡ ಟ್ರೆಂಡ್ ಆಗಿದೆ.
ಟಿಕ್ ಟಾಕ್ ತಾರೆ ಮ್ಯಾಡಿ ಮಾವೋ ಎಂಬವರು ಅರ್ಧ ಗಂಟೆಯ ಮೌನ ನಡಿಗೆಯ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋ ಬಹುಬೇಗ ವೈರಲ್ ಆಗಿ ಟ್ರೆಂಡ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೌನ ನಡಿಗೆ ತುಂಬಾ ಪ್ರಯೋಜನಕಾರಿ ಇದು ಎಂದು ಹೇಳಲಾಗುತ್ತದೆ. ಹಾಗಾದರೆ ಮೌನ ನಡಿಗೆ ಎಂದರೇನು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಮೌನ ನಡಿಗೆ ಅಥವಾ ಸೈಲೆಂಟ್ ವಾಕಿಂಗ್ ಎಂದರೇನು?
ಸೈಲೆಂಟ್ ವಾಕಿಂಗ್ ಎಂದರೆ ನಡೆಯುವಾಗ ಯಾವುದೇ ರೀತಿಯ ಕೃತಕ ಶಬ್ದವಿಲ್ಲದೆ ಒಬ್ಬಂಟಿಯಾಗಿ ನಡೆಯುವುದು. ಕೆಲವರು ವಾಕಿಂಗ್, ಜಾಗಿಂಗ್ ಮಾಡುವಂತಹ ಸಂದರ್ಭದಲ್ಲಿ ಕಿವಿಯಲ್ಲಿ ಹೆಡ್ಫೋನ್ ಇಟ್ಟು ಸಂಗೀತವನ್ನು ಆಳಿಸುತ್ತಾ ವಾಕಿಂಗ್ ಮಾಡುತ್ತಾರೆ. ಆದರೆ ಈ ನಡಿಗೆಯಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಇದರಿಂದ ನಿಮ್ಮ ಗಮನವು ವಿಚಲಿತವಾಗುತ್ತದೆ. ಅದಕ್ಕೆ ಬದಲಾಗಿ ಯಾವುದೇ ಸದ್ದುಗದ್ದಲವಿಲ್ಲದೆ 30 ನಿಮಿಷಗಳ ಕಾಲ ಶಾಂತಿಯುತವಾದ ಪರಿಸರದಲ್ಲಿ ಒಂಟಿಯಾಗಿ ಮೌನ ನಡಿಗೆಯನ್ನು ಅಭ್ಯಾಸ ಮಾಡಬೇಕು. ಇದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಮೌನ ನಡಿಗೆಯ ಪ್ರಯೋಜನಗಳು:
ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ: ದಿ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವು ಮೌನ ನಡಿಗೆ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಿದೆ. ಪ್ರಕೃತಿಯ ಮಡಿಲಲ್ಲಿ ಕೆಲವು ನಿಮಿಷಗಳ ಕಾಲ ಶಾಂತವಾಗಿ ಮತ್ತು ಒಂಟಿಯಾಗಿ ನಡೆಯುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಈ ಅಭ್ಯಾಸವನ್ನು ಪ್ರತಿದಿನ ಮಾಡುವುದರಿಂದ ಮಾನಸಿಕ ಕಾಯಿಲೆಗಳು ಬಾರದಂತೆ ನೋಡಿಕೊಳ್ಳಬಹುದು. ಅಲ್ಲದೆ ಇದು ಒತ್ತಡ ಮತ್ತು ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ನಿಮ್ಮನ್ನು ನೀವು ಸಂತೋಷವಾಗಿರಿಸಬಹುದು:
ಏಕಾಂತವಾದ ಮೌನ ನಡಿಗೆಯು ನಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ಶಾಂತವಾಗಿ ನಡೆಯುವುದು ಧ್ಯಾನದಂತೆ ಎಂದು ಮನೋವೈದ್ಯ ಡಾ. ರಫಾತ್ ಡಬ್ಲ್ಯೂ. ಗಿರ್ಗಿಸ್ ಅವರು ಹೇಳುತ್ತಾರೆ. ವಾಸ್ತವವಾಗಿ ಹೊರಗಿನ ಶಬ್ದಗಳು ಮನಸ್ಸನ್ನು ಪ್ರವೇಶಿಸಿದಾಗ ಒತ್ತಡ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶಾಂತವಾದ ಸ್ಥಳದಲ್ಲಿ ಮೌನ ನಡಿಗೆಯನ್ನು ಅಭ್ಯಾಸ ಮಾಡುವುದರಿಂದ ಒತ್ತಡವು ನಿವಾರಣೆಯಾಗಿ ಮನಸ್ಸು ಸಂತೋಷವಾಗಿರುತ್ತದೆ.
ಉತ್ತಮ ವ್ಯಾಯಾಮವಾಗಿದೆ:
ನೀವು ಯಾವುದೇ ದೈಹಿಕ ಚಟುವಟಿಕೆಗಳನ್ನು ಮಾಡುವಾಗ ನಿಮ್ಮ ಸಂಪೂರ್ಣ ಗಮನವನ್ನು ಆ ಕೆಲಸದ ಕಡೆಗೆ ನೀಡಿದರೆ ಅದರ ಫಲಿತಾಂಶವು ಉತ್ತಮವಾಗಿರುತ್ತದೆ. ಆದರೆ ನೀವು ಒಂದೇ ಬಾರಿಗೆ 2 ಅಥವಾ ಹೆಚ್ಚಿನ ಕೆಲಸಗಳನ್ನು ಮಾಡುತ್ತಿದ್ದರೆ, ಅಂದರೆ ವಾಕಿಂಗ್ ಮಾಡುವಾಗ ಸಂಗೀತವನ್ನು ಆಲಿಸುವುದು ಅಥವಾ ಮಾತನಾಡಿದರೆ ಅದು ನಿಮ್ಮನ್ನು ಗೊಂದಲಕ್ಕೆ ದೂಡಬಹುದು. ಅದರ ಬದಲಾಗಿ ಯಾವುದೇ ಶಬ್ದವಿಲ್ಲದ ಪ್ರಶಾಂತವಾದ ವಾತಾವರಣದಲ್ಲಿ ಏಕಾಂಗಿಯಾಗಿ ನಡೆಯುವುದರಿಂದ ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅಲ್ಲದೆ ಇದು ಉತ್ತಮ ವ್ಯಾಯಾಮವಾಗಿದೆ.