ನಮ್ಮ ದಿನನಿತ್ಯದ ಜೀವನದಲ್ಲಿ ಮೊಬೈಲ್ ಫೋನ್ ಬಳಕೆ ಅನಿವಾರ್ಯವಾಗಿದೆ. ನಾವು ದಿನಕ್ಕೆ ಗಂಟೆಗಟ್ಟಲೇ ಮೊಬೈಲ್ ಬಳಸುತ್ತೇವೆ. ಇದರಿಂದ ಎಷ್ಟೋ ಬಾರಿ ಸಮಯ ಹೋದದ್ದೇ ಗೊತ್ತಾಗುವುದಿಲ್ಲ.
ನಮ್ಮಲ್ಲಿ ಬಹುತೇಕರಿಗೆ ಮೊಬೈಲ್ ಕವರ್ ನಲ್ಲಿ ಅಂದರೆ ಮೊಬೈಲ್ ಹಿಂದೆ ನೋಟುಗಳನ್ನು ಇಡುವ ಅಭ್ಯಾಸವಿದೆ. ತೀರ ಅಗತ್ಯಕ್ಕೆ ಬೇಕಾದಾಗ ಆ ಹಣವನನ್ನು ಬಳಸುತ್ತೇವೆ. ಆದರೆ ಈ ಅಗತ್ಯಕ್ಕಿರುವ ಮೊಬೈಲ್ ಕವರ್ ಹಿಂದಿನ ನೋಟಿನಿಂದ ಪ್ರಾಣಕ್ಕೆ ಅಪಾಯ ಕೂಡ ಇದೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ಹೌದು ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋ ಈ ಯೋಚನೆ ಬರುವಂತೆ ಮಾಡಿದೆ.
ನಮ್ಮಲ್ಲಿ ಎಷ್ಟೇ ದುಬಾರಿ ಫೋನ್ ಬೇಕಾದರೂ ಇರಲಿ, ಕೆಲವೊಮ್ಮೆ ಅತಿಯಾದ ಬಳಕೆಯಿಂದ ನಮ್ಮ ಫೋನಿನ ತಾಪಮಾನ ಅಂದರೆ ಮೊಬೈಲ್ ಹೀಟ್ ಆಗುತ್ತದೆ. ಮೊಬೈಲ್ ಅತಿಯಾಗಿ ಹೀಟ್ ಆದರೆ ಅದು ಸ್ಫೋಟಿಸುವ ಸಾಧ್ಯತೆ ಕೂಡ ಇರುತ್ತದೆ.
ಇನ್ಸ್ಟಾಗ್ರಾಮ್ ನಲ್ಲಿ ಅನಾಮಿಕ ವರ್ಸಟೈಲ್ ಎನ್ನುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮೊಬೈಲ್ ಬ್ಯಾಕ್ ಸೈಡ್ ನಲ್ಲಿ ನೋಟು ಇಡುವುದರಿಂದ ಉಂಟಾಗುವ ಅಪಾಯದ ಬಗ್ಗೆ ಹೇಳಿದ್ದಾರೆ.
“ನಿಮಗೆ ಮೊಬೈಲ್ ಹಿಂದೆ ನೋಟುಗಳನ್ನು ಇಡುವ ಅಭ್ಯಾಸವಿದ್ದರೆ ಎಚ್ಚರದಿಂದಿರಿ. ಮೊಬೈಲ್ ನ ಪ್ರೊಸೆಸರ್ ವೇಗವಾಗಿ ಕೆಲಸ ಮಾಡಿದರೆ ಹೀಟ್ ಆಗುತ್ತದೆ. ಆಗ ನೀವು ಒಂದು ವೇಳೆ ನೋಟು ಇಟ್ಟಿದ್ದರೆ ಬೆಂಕಿ ಆಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಕಾರಣ ನೋಟಿನಲ್ಲಿ ಪೇಪರ್‌ಯೊಟ್ಟಿಗೆ ಕೆಲ ಕೆಮಿಕಲ್ ಗಳನ್ನು ಬಳಸುತ್ತಾರೆ. ಇದರಿಂದ ಬೆಂಕಿ ಆಗುವ ಸಾಧ್ಯತೆ ಇರುತ್ತದೆ” ಎಂದು ನೋಟು ಇಡುವ ವಿಡಿಯೋವನ್ನು ಹಂಚಿಕೊಂಡು ಮಾಹಿತಿಯನ್ನು ನೀಡಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, 17 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದು, 2.50 ಲಕ್ಷ ಜನ ಲೈಕ್ ಮಾಡಿದ್ದಾರೆ. ಹಲವರು ಈ ವಿಡಿಯೋದಿಂದ ತುಂಬಾ ಉಪಕಾರವಾಯಿತೆಂದು ಕಮೆಂಟ್ ಮಾಡಿದ್ದಾರೆ.