ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಸಿಲಿಂಡರ್ ಸಾಗಾಟದ ಲಾರಿ ಮತ್ತು ಎಳನೀರು ಸಾಗಾಟದ ಟೆಂಪೋ ಮುಖಾಮುಖಿ ಢಿಕ್ಕಿಯಾಗಿ, ಟೆಂಪೋ ಮಗುಚಿ ಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ.
ಢಿಕ್ಕಿಯ ರಭಸಕ್ಕೆ ಎಳನೀರು ತುಂಬಿದ್ದ 407 ವಾಹನ ಪಲ್ಟಿಯಾಗಿದ್ದು, ರಸ್ತೆಯ ತುಂಬೆಲ್ಲಾ ಎಳನೀರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸಣ್ಣ ವಾಹನಗಳು ಸಂಚರಿಸುವಷ್ಟು ಜಾಗ ಇದ್ದರು ಅಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನುಗ್ಗಿಸಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು.
ಘಾಟಿ ಭಾಗದಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ನೂರಾರು ವಾಹನಗಳು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಜತೆಗೆ ಘಾಟಿ ವಿಭಾಗದಲ್ಲಿ ಸುರಿಯುತ್ತಿದ್ದ ಮಳೆ, ಮಂಜು ಕವಿದ ವಾತಾವರಣದ ಕಾರಣ ಹೆಚ್ಚಿನ ಸಮಸ್ಯೆ ಕಂಡು ಬಂತು. ಇದರಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ವಾಹನಗಳಿಗೆ ಸುಗಮ ಸಂಚಾರ ಕಲ್ಪಿಸಲು ಅಡ್ಡಿಯಾಯಿತು.
ಪೊಲೀಸರು ಹಾಗೂ ಸ್ಥಳೀಯರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ವಾಹನಗಳಿಗೆ ಸಂಚರಿಸಲು ಅನುಕೂಲ ಮಾಡಿ ಕೊಟ್ಟರು. ಅಪಘಾತದಲ್ಲಿ ಲಾರಿ ಮತ್ತು 407 ಎರಡೂ ವಾಹನದ ಇಬ್ಬರು ಚಾಲಕರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.