ದರೋಡೆಕೋರರನ್ನು ಹಿಡಿಯಬೇಕಾದವರೇ ಕಳ್ಳರ ಜೊತೆ ಸೇರಿ ಮನೆಕಳ್ಳತನಮಾಡುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್ ಆಗಿದ್ದಾನೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ, ಕಳ್ಳರನ್ನು ಹಿಡಿದು ಶಿಕ್ಷೆಗೊಳಪಡಿಸುವ ಪೊಲೀಸಪ್ಪ ಕಳ್ಳರ ಜೊತೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಯಲ್ಲಪ್ಪ ಎನ್ನುವಾತನ್ನನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಒಂದಲ್ಲ ಎರಡಲ್ಲ ಒಟ್ಟು ಮೂರು ಮನೆಗಳ್ಳತನ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಯಲ್ಲಪ್ಪ ಭಾಗಿಯಾಗಿದ್ದ. ಈ ಹಿಂದೆ ಚಂದ್ರಾಲೇಔಟ್, ಚಿಕ್ಕ ಜಾಲ,ಬನಶಂಕರಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪದ ಮೇಲೆ ಯಲ್ಲಪ್ಪನನ್ನ ಅಮಾನತು ಮಾಡಿ ತನಿಖೆಗೆ ಅದೇಶ ಹೊರಡಿಸಲಾಗಿತ್ತು. ಆದರೂ ತನ್ನ ಹಳೆ ಚಾಳಿಯನ್ನ ಬಿಡದ ಯಲ್ಲಪ್ಪ, ತನ್ನ ಕೈಚಳಕ ಮುಂದುವರೆಸಿ ಇದೀಗ ಲಾಕ್ ಆಗಿದ್ದಾನೆ.
ಚಂದ್ರಾಲೇಔಟ್, ಚಿಕ್ಕ ಜಾಲದಲ್ಲೂ ಕೈ ಚಳಕ ತೋರಿಸಿದ್ದ ಯಲ್ಲಪ್ಪ. ಈ ಹಿಂದೆ ಕೂಡ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಅಗ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್ ಟೇಬಲ್ ಅಗಿದ್ದ. ಕಳ್ಳತನ ಆರೋಪಿಗಳ ವಿಚಾರಣೆ ವೇಳೆ ಕಾನ್ಸ್ಟೇಬಲ್ ಯಲ್ಲಪನ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದರು. ಬಳಿಕ ತನಿಖೆ ನಡೆಸಿದ್ದ ಪೊಲೀಸರು ಪ್ರಾಥಮಿಕ ಹಂತದಲ್ಲಿ ಯಲಪ್ಪನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಯಲ್ಲಪ್ಪನನ್ನು ಅಮಾನತು ಮಾಡಲಾಗಿತ್ತು.
ಇನ್ನು ಕಳ್ಳತನ ಮಾಡಿದ್ದ ವಸ್ತುಗಳ ರಿಕವರಿಗಾಗಿ ಯಲ್ಲಪ್ಪನನ್ನು ಆತನ ಊರಿಗೆ ಕರೆದುಕೊಂಡು ಹೋದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಊರಿಗೆ ಮಾತ್ರ ಕರೆದುಕೊಂಡು ಹೋಗಬೇಡಿ ಎಂದು ಪಟ್ಟು ಹಿಡಿದಿದ್ದ ಎಂದು ತಿಳಿದುಬಂದಿದೆ.
ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆರಕ್ಷಕರು ಇರುತ್ತಾರೆ. ಸ್ಥಳೀಯವಾಗಿ ನಡೆಯುವ ಸಾವಿರಾರು ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ತನಿಖೆ ನಡೆಯುವಾಗ ಅ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಸಾಕ್ಷಿಗಳನ್ನು ಒದಗಿಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುವುದರಲ್ಲಿ ಪೋಲಿಸರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅದೆಷ್ಟೋ ಪ್ರಕರಣಗಳನ್ನು ನ್ಯಾಯಾಲಯದವರೆಗೂ ಬಾರದಂತೆ ಸ್ಥಳೀಯವಾಗಿಯೇ ಪೋಲಿಸರು ಬಗೆಹರಿಸುವ ಕಾರಣ ನಮ್ಮ ಸಮಾಜದಲ್ಲಿ ಪೋಲಿಸರಿಗೆ ಅಪಾರವಾದ ಗೌರವ ಇದೆ, ನಮ್ಮ ಕರ್ನಾಟಕದ ಪೋಲಿಸರೆಂದರೆ ದಕ್ಷತೆ ಮತ್ತು ಪ್ರಾಮಣಿಕತೆಗೆ ಇಡೀ ದೇಶದಲ್ಲೇ ಹೆಸರುವಾಸಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಪರಾಧಿಗಳನ್ನು ಹಿಡಿದು ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾದಂತಹ ಕೆಲ ಪೋಲೀಸರೇ ಈ ರೀತಿಯ ಅಂದರೆ ಲಂಚ ಹೀಗೆ ಅನೇಕ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದು ದುರಂತ.