ದಸರಾ ಆಚರಣೆ ಸಮಯದಲ್ಲಿ ಕೊರಗ ಜನಾಂಗದವರ ವೇಷ ಧರಿಸಿ ಅಂಗಡಿ ಮನೆಗಳ ಮುಂದೆ ಕುಣಿದು ಜಾತಿ ನಿಂದನೆ ಮಾಡುವುದು ಮತ್ತು ಅಮಾವಾಸ್ಯೆ ದಿನಗಳಲ್ಲಿ ಕೊರಗ ಜನಾಂಗದವರ ಮಹಿಳೆಯರಿಗೆ ಉಗುರು, ತಲೆಕೂದಲು ಊಟದಲ್ಲಿ ಹಾಕಿ ನೀಡುವುದು ಇತ್ಯಾದಿ ಪದ್ಧತಿಗಳನ್ನು ಈಗಾಗಲೇ ನಿಷೇಧಿಸಲಾಗಿದೆ.
ಕಂಬಳದ ಹಿಂದಿನ ದಿನ ಕಂಬಳದ ಕರೆಯಲ್ಲಿ ಕುಪ್ಪಿಚೂರು, ಮುಳ್ಳು ಮುಂತಾದವುಗಳು ಇರುವ ಬಗ್ಗೆ ನೋಡಲು ಕೊರಗ ಜನಾಂಗದವರನ್ನು ಬಳಸಿಕೊಳ್ಳುವುದು, ಜಾತ್ರೆ, ಕಂಬಳ ಮತ್ತು ಇನ್ನಿತರ ಸಾರ್ವಜನಿಕ ಸಮಾರಂಭಗಳಲ್ಲಿ ಕೊರಗ ಜನಾಂಗದವರನ್ನುಡೋಲು ಬಡಿಸಿ ಕುಣಿತಕ್ಕೆ ಬಳಸಿಕೊಳ್ಳುವುದು ನಿಷೇಧಿಸಲಾಗಿದೆ. ಸೀಮಂತದ ದಿನ ಸೀಮಂತದ ಎಂಜಲು ಊಟವನ್ನು ಕೊರಗ ಜನಾಂಗದ ಮಹಿಳೆಯರಿಗೆ ನೀಡುವುದು ಇತ್ಯಾದಿ ಕೊರಗರ ಅಜಲು ಪದ್ಧತಿ ನಿಷೇಧ ಕಾಯ್ದೆಯಡಿ ಬರುವುದರಿಂದ ಇಂತಹ ಆಚರಣೆಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.