ಪ್ರೇಮ ವೈಫಲ್ಯ ಕಂಡ ಕಾರಣಕ್ಕಾಗಿ ಮಾನಸಿಕವಾಗಿ ನೊಂದುಕೊಂಡ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮಾಜೆ ಎಂಬಲ್ಲಿ ನಡೆದಿದೆ.
ಕಡೇಶಿವಾಲಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಸಚಿನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ.
ಕಡೇಶಿವಾಲಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ದಿ.ಸುಂದರ ಎಂಬವರ ಮಗ ಸಚಿನ್ ಜೀವನದಲ್ಲಿ ಜಿಗುಪ್ಸೆಗೊಂಡು ಚೀಟಿ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಸಚಿನ್ ಬಂಟ್ವಾಳದ ಲೆವಿನ್ ಇಲೆಕ್ಟ್ರಿಕಲ್ ಕಂಪೆನಿಯಲ್ಲಿ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಅ.18 ರಂದು ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬರದ ಹಿನ್ನೆಲೆಯಲ್ಲಿ ಈತನನ್ನು ಹುಡುಕಲು ಶುರು ಮಾಡಿದ್ದರು.
ಪೋನ್ ಮಾಡಿದಾಗ ರಿಂಗ್ ಆಗುತ್ತಿತ್ತೆ ವಿನಹ ರಿಸೀವ್ ಮಾಡದೆ ಇರುವಾಗ ಬಂಟ್ವಾಳದ ಕಾಮಾಜೆ ಮಾವನ ಮನೆಯರವಲ್ಲಿ ವಿಚಾರಿಸಿದ್ದಾರೆ. ಅವರು ಹುಡುಕಿದಾಗ ಮುಂಜಾನೆ ಸುಮಾರು 3 ಗಂಟೆಯ ವೇಳೆ ಈತನ ಸ್ಕೂಟರ್ ಬಿ.ಮೂಡ ಗ್ರಾಮದ ಮಿತ್ತಕೋಡಿ ಎಂಬಲ್ಲಿರುವ ಮೈದಾನದ ಬಳಿ ನಿಲ್ಲಿಸಲಾಗಿತ್ತು.
ಆದರೆ ಸಚಿನ್ ಅಲ್ಲಿ ಕಾಣದ ಹಿನ್ನೆಲೆಯಲ್ಲಿ ಪೋನ್ ಮಾಡಿದಾಗ ಅಲ್ಲೇ ಸಮೀಪದ ಗುಡ್ಡವೊಂದರಲ್ಲಿ ಪೋನ್ ರಿಂಗ್ ಕೇಳುತ್ತಿತ್ತು ಎಂದು ಹೋಗಿ ನೋಡಿದಾಗ ಆತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
ಆತ್ಮಹತ್ಯೆ ಮಾಡುವ ಮೊದಲು ಈತ ಚೀಟಿಯನ್ನು ಬರೆದು ಕಿಸೆಯಲ್ಲಿಟ್ಟಿದ್ದು, ಇದೀಗ ಚೀಟಿ ಪೋಲೀಸರ ಕೈ ಸೇರಿದೆ. ಪ್ರೇಮ ವೈಫಲ್ಯವೇ ಆತ್ಮಹತ್ಯೆ ಕಾರಣ ಎಂಬ ಈತ ಚೀಟಿಯಲ್ಲಿ ಬರೆದಿದ್ದ ಎಂದು ಹೇಳಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಪೋಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ.
ನಗರ ಠಾಣಾ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಮತ್ತು ಎಸ್. ಐ.ರಾಮಕೃಷ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.