ನೆಲ್ಯಾಡಿ: ಶ್ರೀರಾಮ ಪ್ರೌಢ ಶಾಲೆ ಸೂರ್ಯನಗರ ಇಲ್ಲಿ ದಿನಾಂಕ ಅ.14 ರಿಂದ ಅ 20ರ ವರೆಗೆ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ನಡೆಯಿತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಮತ್ತು ಶಿಬಿರದ ನಿರ್ದೇಶಕರಾದ ಚಂದ್ರಶೇಖರ್ ಕೆ ಅವರು “ಯುವಜನರು ತುಂಬಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಯುವಜನರು ಮನಸ್ಸು ಮಾಡಿದರೆ ಒಂದೇ ಕ್ಷಣದಲ್ಲಿ ಅಗಾಧವಾದದ್ದನ್ನ ಕಟ್ಟುತ್ತಾರೆ ಅಥವಾ ಅಗಾಧವಾದದ್ದನ್ನು ಕೆಡಲೂಬಹುದು. ಅಂದರೆ ಅವರ ಸಾಮರ್ಥ್ಯ ಅಂತದ್ದು. ಅವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದಾಗ ರಾಷ್ಟ್ರ ಕಟ್ಟುವ ಕೆಲಸವನ್ನು ಮಾಡುತ್ತಾ ಸಮಾಜಮುಖಿಯಾಗಿ ಬೆಳೆಯುತ್ತಾ ಹೋಗುತ್ತಾರೆ. ಈ ಶಿಕ್ಷಣ, ಮಾರ್ಗದರ್ಶನ ಅವರಿಗೆ ಇಂತಹ ಶಿಬಿರಗಳಲ್ಲಿ ಖಂಡಿತವಾಗಿಯೂ ಸಿಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ವಿಶೇಷವಾಗಿ ಶಾರೀರಿಕ ಮತ್ತು ಮಾನಸಿಕವಾಗಿ ಅಭಿವೃದ್ಧಿಯಾಗುತ್ತಾರೆ. ಕೆಲಸಗಳನ್ನ ಮಾಡುತ್ತಾ ಕೆಲಸವನ್ನು ಕಲಿಯುತ್ತಾರೆ ಹಾಗೆಯೇ ಮಾನವೀಯ ಸಂಬಂಧಗಳು ಮೌಲ್ಯಗಳನ್ನ ಇಲ್ಲಿ ಶಿಬಿರಾರ್ಥಿಗಳು ಕಲಿಯುತ್ತಾರೆ. ಈ ಶಿಬಿರ ನಡೆಯಬೇಕು ಅಂತ ಹೇಳಿದರೆ ಅನೇಕ ಜನರು, ಅನೇಕ ರೀತಿಯಲ್ಲಿ ಸಮರ್ಪಣೆಯನ್ನು ಮಾಡಿದ್ದಾರೆ. ಅಂತಹ ಎಲ್ಲ ಜನರಿಗೂ ನಾವು ಆಭಾರಿಗಳಾಗಿದ್ದೇವೆ. ಇಂತಹ ಸಮರ್ಪಣೆಗಳು ಖಂಡಿತವಾಗಿಯೂ ಶಿಬಿರಾರ್ಥಿಗಳಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಂತಹ ಉದ್ದೇಶವ ಹೊಂದಿರುವ ಈ ವಿಶೇಷ ಶಿಬಿರವು ಯಶಸ್ವಿಯಾಗಿದ್ದು ಇಂದಿಗೆ ಸಂಪನ್ನವಾಗಿದೆ. ಎಲ್ಲ ಶಿಬಿರಾರ್ಥಿಗಳು ತಾವು ಕಲಿತದ್ದನ್ನು ಸಮಾಜದ ಒಳಿತಿಗಾಗಿ ಉಪಯೋಗ ಮಾಡಿ ನಿರಂತರವಾದ ಅಭಿವೃದ್ಧಿಯನ್ನ ಕಾಣುವಂತಾಗಲಿ” ಎಂದು ಹೇಳಿದರು.
ಅತಿಥಿಗಳಾದ ಶ್ರೀರಾಮ ವಿದ್ಯಾಲಯದ ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ ಇದರ ಅಧ್ಯಕ್ಷ ಡಾ.ಸದಾನಂದ ಕುಂದರ್, ಗ್ರಾಮ ಪಂಚಾಯತ್ ಸದಸ್ಯಉಮೇಶ್ ಪಿಲವೂರ್, ಶ್ರೀರಾಮ ಶಾಲೆಯ ಆಡಳಿತ ಸಮಿತಿ ಸದಸ್ಯ ರವಿಚಂದ್ರ ಹೊಸವೊಕ್ಲು, ಸಾಮಾಜಿಕ ಕಾರ್ಯಕರ್ತ ಜಯಾನಂದ ಬಂಟ್ರಿಯಾಲ್, ಶ್ರೀರಾಮ ಶಾಲೆಯ ಮುಖ್ಯಸ್ಥರು ಮತ್ತು ಖ್ಯಾತ ಜ್ಯೋತಿಷಿ ಶ್ರೀಧರ್ ಗೋರೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಇದರ ಸದಸ್ಯರಾದ ಲಕ್ಷ್ಮೀನಾರಾಯಣರಾವ್ ಅತೂರ್ ಮಾತನಾಡುತ್ತಾ “ರಾಷ್ಟ್ರೀಯ ಸೇವಾ ಯೋಜನೆಯ ಈ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಸುಮಾರು ಏಳು ದಿವಸಗಳ ಕಾಲ ಮನೆಯನ್ನ, ತಮ್ಮ ತಂದೆ ತಾಯಿಯರನ್ನ, ಮೊಬೈಲನ್ನು ಅಥವಾ ಇನ್ನಿತರ ಸೌಕರ್ಯಗಳನ್ನ ಬಿಟ್ಟು ಹೊಸ ವ್ಯವಸ್ಥೆಗೆ ಒಗ್ಗಿಕೊಂಡು ಇರಬೇಕಾಗುತ್ತದೆ. ಶಿಬಿರಾರ್ಥಿಗಳಿಗೆ ಇದು ಸ್ವಲ್ಪ ಕಷ್ಟವಾಗಬಹುದು ಆದರೆ ಅದು ಅನೇಕ ತರದ ಜೀವನ ಕೌಶಲಗಳನ್ನು ಅವರಲ್ಲಿ ಬೆಳೆಸುತ್ತದೆ. ನಾನು ಅಲ್ಲ ನಾವು ಎಂಬ ಶ್ರೇಷ್ಠವಾದ ತತ್ವವನ್ನು ಎನ್ಎಸ್ಎಸ್ ಶಿಬಿರಗಳಲ್ಲಿ ಕಲಿಯಬಹುದು. ಇಂತಹ ತತ್ವಗಳು ಸಮಾಜಕ್ಕೆ ಪೂರಕವಾಗಿರುತ್ತದೆ. ಅನೇಕ ವಿದ್ಯಾರ್ಥಿಗಳಿದ್ದರೂ ಕೂಡ, ಕೇವಲ ಸೀಮಿತ ವಿದ್ಯಾರ್ಥಿಗಳಿಗೆ ಈ ಶಿಬಿರದಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಇಂತಹ ಅವಕಾಶವನ್ನ ಪಡೆದಂತಹ ನೀವೆಲ್ಲರೂ ಕೂಡ ಈ ಅವಕಾಶದ ಸದ್ಬಳಕೆ ಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲಿ ಸಮಾಜವನ್ನು ಮುನ್ನಡೆಸುವ ಉತ್ತಮ ನಾಯಕರಾಗಿ ಮೂಡಿಬರಲಿ ಎಂಬುದೇ ನಮ್ಮೆಲ್ಲರ ಆಶಯ” ಎಂದರು.
ಶಿಬಿರಾರ್ಥಿಗಳಾದ ಸಮೀಕ್ಷಾ ಮತ್ತು ಧನರಾಜ್ ಶಿಬಿರದ ಕುರಿತಾದ ತಮ್ಮ ಅನಿಸಿಕೆ-ಅನುಭವಗಳನ್ನು ಹಂಚಿಕೊಂಡರು.
ಶಿಬಿರಾಧಿಕಾರಿಗಳಾದ ತಿಲಕಾಕ್ಷಕ್ಕೆ ಇವರು ಶಿಬಿರದ ವರದಿಯನ್ನ ವಾಚಿಸಿದರು. ಎಲ್ಲ ಶಿಬಿರಾರ್ಥಿಗಳಿಗೆ ಶಾಲೆಯ ನಿವೃತ್ತ ಶಿಕ್ಷಕ ದುರ್ಗಪ್ಪ ಇವರು ಮಾವಿನ ಗಿಡಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅತ್ಯುತ್ತಮ ಶಿಬಿರಾರ್ಥಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶ್ರೀರಾಮ ವಿದ್ಯಾಲಯದ ಮುಖ್ಯಸ್ಥರಾದಸುಬ್ರಾಯ ಪುಣಚ, ಶಾಲೆಯ ಮುಖ್ಯ ಗುರುಗಳಾದ ಗಣೇಶ ವಾಗ್ಲೆ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸ್ವಾತಿ ಸ್ವಾಗತಿಸಿದರು. ಕಾಲೇಜಿನ ಆಂಗ್ಲಭಾಷ ಉಪನ್ಯಾಸಕವಿನಿಲ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಸಹ ಯೋಜನಾಧಿಕಾರಿಗಳಾದ ಕೀರ್ತನ್ ಡಿ.ಜೆ ನಿರೂಪಿಸಿದರು. ವಿದ್ಯಾರ್ಥಿಗಳೆಲ್ಲರೂ ಎನ್ಎಸ್ಎಸ್ ಗೀತೆಯನ್ನು ಹಾಡಿದರು.