ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಹ್ಯಾಪಿ ಹಾರ್ಮೋನ್ಗಳು ಇರುವುದು ತುಂಬಾನೇ ಮುಖ್ಯ. ನಾವು ಸಂತೋಷವಾಗಿರಲು ನಮ್ಮ ದೇಹದಲ್ಲಿ ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಆ ಹಾರ್ಮೋನ್ಗಳಿಂದ ಮಾತ್ರ ನಾವು ಖುಷಿಯಿಂದ ಮತ್ತು ಲವಲವಿಕೆಯಿಂದ ಇರಲು ಸಾಧ್ಯ. ಹೀಗಾಗಿ ನಾವು ಆ ಹಾರ್ಮೋನುಗಳ ಹೆಸರುಗಳು ಮತ್ತು ಅವುಗಳ ಮಟ್ಟವನ್ನು ಹೆಚ್ಚಿಸಲು ಏನು ಮಾಡಬೇಕೆಂದು ತಿಳಿದುಕೊಳ್ಳೋಣ.
ಹ್ಯಾಪಿ ಹಾರ್ಮೋನ್ಸ್ ಯಾವುವೆಂದರೆ:
ಎಂಡಾರ್ಫಿನ್‌ಗಳು: ಈ ಎಂಡಾರ್ಫಿನ್‌ಗಳು ನಮಗೆ ಸಂತೋಷವನ್ನು ಉಂಟುಮಾಡಲು ನೇರವಾಗಿ ಸಂಬಂಧಿಸಿದ ಹಾರ್ಮೋನುಗಳಾಗಿವೆ. ಇವು ನೋವನ್ನು ಕಡಿಮೆ ಮಾಡುತ್ತವೆ ಮತ್ತು ನಮ್ಮ ದೇಹವನ್ನು ಆರಾದಾಯಕವಾಗಿಸುತ್ತದೆ. ಗಾಯದ ಕಾರಣದಿಂದಾಗಿ ದೇಹದ ಯಾವುದೇ ಸ್ನಾಯುಗಳಿಗೆ ಹಾನಿಯಾದರೆ, ಈ ಎಂಡಾರ್ಫಿನ್‌ಗಳು ರಿಪೇರಿ ಮಾಡಿ, ನಮ್ಮನ್ನು ಆರಾಮದಾಯಕ ಸ್ಥಿತಿಗೆ ತರುತ್ತವೆ.
ಡೋಪಮೈನ್: ಈ ಹಾರ್ಮೋನ್‌ನ ಹೆಚ್ಚಿನ ಬಿಡುಗಡೆಯ ಕಾರಣ, ನಾವು ಉತ್ತಮ ಆಲೋಚನೆಗಳೊಂದಿಗೆ ಶಕ್ತಿಯುತರಾಗಿದ್ದೇವೆ. ತೂಕವನ್ನು ಕಳೆದುಕೊಳ್ಳುವುದು ಮತ್ತು ಉತ್ತಮ ಆಕಾರವನ್ನು ಪಡೆಯುವುದು ಸೇರಿದಂತೆ ದೊಡ್ಡ ಅಥವಾ ಸಣ್ಣ ಗುರಿಗಳನ್ನು ಸಾಧಿಸಿದಾಗ ಈ ಹಾರ್ಮೋನ್ ಅಧಿಕವಾಗಿ ಉತ್ಪತ್ತಿಯಾಗುತ್ತದೆ ಮತ್ತು ನಮ್ಮನ್ನು ಹೆಚ್ಚು ಉತ್ಸುಕಗೊಳಿಸುತ್ತದೆ.
ಸಿರೊಟೋನಿನ್: ಈ ಸಿರೊಟೋನಿನ್ ಹಾರ್ಮೋನ್ ನಮ್ಮಲ್ಲಿ ಒತ್ತಡ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನಾವು ಆರೋಗ್ಯವಾಗಿದ್ದೇವೆ ಎಂದು ಭಾವಿಸುತ್ತೇವೆ.
ಹ್ಯಾಪಿ ಹಾರ್ಮೋನ್ಸ್ ಹೆಚ್ಚಿಸಲು ಏನು ಮಾಡಬೇಕು?
ಈ ಸಂತೋಷದ ಹಾರ್ಮೋನ್ಗಳನ್ನು ಹೆಚ್ಚಿಸಿಕೊಳ್ಳಬೇಕಾದರೆ, ಪ್ರಾಣಿಗಳ ಜತೆ ಆಟವಾಡುವುದು, ತಮ್ಮ ಪ್ರೀತಿ ಪಾತ್ರರನ್ನು ಆಲಂಗಿಸುವುದು ಮತ್ತು ಚುಂಬಿಸುವುದನ್ನು ಮಾಡಿದಾಗ ಹ್ಯಾಪಿ ಹಾರ್ಮೋನ್ಗಳು ಬಿಡುಗಡೆಯಾಗುತ್ತವೆ. ಸಂತೋಷದಿಂದ ಹಾಗೂ ಸದಾ ಹಸನ್ಮುಖಿಯಾಗಿರಲು ನಿಮಗೆ ನೆರವಾಗುವ ಯಾವುದೇ ಕೆಲಸವನ್ನು ಮಾಡಿ. ಪ್ರವಾಸಿ ಸ್ಥಳಗಳಿಗೆ ಭೇಟಿ, ಒಳ್ಳೆಯ ಕಾಮಿಕ್ ಪುಸ್ತಕಗಳನ್ನು ಓದಿ, ಪ್ರಕೃತಿಯಲ್ಲಿ ಸಮಯ ಕಳೆಯುವುದು ಸೇರಿದಂತೆ ಮನಸ್ಸಿಗೆ ಮುದ ನೀಡುವಂತಹ ಕೆಲಸಗಳನ್ನು ಮಾಡಿ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಮೌಲ್ಯಯುತವಾಗ ಸಮಯವನ್ನು ಕಳೆಯಿರಿ. ಈ ರೀತಿ ಮಾಡುವುದರಿಂದ ದೇಹದಲ್ಲಿ ಹ್ಯಾಪಿ ಹಾರ್ಮೋನ್ಗಳು ಹೆಚ್ಚಾಗುತ್ತವೆ.
ಬಹಳ ಪ್ರಮುಖವಾಗಿ ಹೆಚ್ಚಿನ ಒತ್ತಡದ ಚಟುವಟಿಕೆಗಳನ್ನು ಆದಷ್ಟು ತಪ್ಪಿಸಬೇಕು. ಒತ್ತಡದ ಬದುಕೇ ಒಂದು ನರಕದಂತೆ ಎಂಬುದು ತಿಳಿದಿರಲಿ. ಯಾವುದೋ ಒಂದು ಕಹಿ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡ ಕೊರಗಬೇಡಿ. ಎಲ್ಲ ಸಮಸ್ಯೆಗಳಿಗೂ ಕಾಲವೇ ಔಷಧಿ ಮತ್ತು ಆಗೋದೆಲ್ಲ ಒಳ್ಳೆಯದ್ದಕ್ಕೆ ಎಂಬ ಧನಾತ್ಮಕ ಮನೋಭಾವದೊಂದಿಗೆ ಜೀವನದಲ್ಲಿ ಮುನ್ನಡೆಯಿರಿ. ಕೆಲಸ ಅಂತಾ ಬಂದಾಗ ಒತ್ತಡಕ್ಕೆ ಸಿಲುಕದೇ ನೀವು ಏನು ಮಾಡುತ್ತೀರೋ ಅದರ ಮೇಲೆ ಮಾತ್ರ ನಿಮ್ಮ ಭವಿಷ್ಯ ಮತ್ತು ಗಮನವನ್ನು ಕೇಂದ್ರೀಕರಿಸಿ. ಆಗ ನೀವು ಆ ಕೆಲಸವನ್ನು ಬಹಳ ಸಂತೋಷದಿಂದ ಮಾಡಲು ಸಾಧ್ಯವಾಗುತ್ತದೆ. ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.