ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಧರಿಸಿದ್ದ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಅಪರಿಚತರು ಹುಲಿ ಉಗುರನ್ನು ಮಾರಲು ತಂದಿದ್ದರು. ಅವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಮಾರಾಟ ಮಾಡುತ್ತಿರುವ ವಿಷಯ ಗೆಳೆಯರಿಂದ ತಿಳಿಯಿತು. ಹಣ ಕೊಟ್ಟು ಇದನ್ನು ಖರೀದಿ ಮಾಡಿದ್ದೇನೆ. ನಾನು ವ್ಯಕ್ತಿಯೊಬ್ಬನಿಂದ ಹುಲಿ ಉಗುರು ಖರೀದಿಸಿದ್ದೆ ಎಂದು ವರ್ತೂರ ಸಂತೋಷ್ ಅಧಿಕಾರಿಗಳ ಮುಂದೆ ಹೇಳಿದ್ದಾರೆ.
ಸ್ಪರ್ಧಿ ವರ್ತೂರು ಸಂತೋಷ್ ಜೈಲು ಪಾಲಾಗಿದ್ದಾರೆ. ಹುಲಿ ಉಗುರು ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಅರಣ್ಯ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಂತೋಷ್ ಅವರನ್ನು ಹಾಜರು ಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಹಬ್ಬದ ಹಿನ್ನೆಲೆ ಎರಡು ದಿನ ಕೋರ್ಟ್ ರಜೆ ಇದ್ದ ಕಾರಣ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ಜಡ್ಜ್ ನಿವಾಸಕ್ಕೆ ಕರೆದೊಯ್ದು ಸಂತೋಷ್‌ರನ್ನು ಹಾಜರು ಪಡಿಸಲಾಯ್ತು. ವಿಚಾರಣೆ ನಡೆಸಿದ ಎಸಿಜೆಎಂ ನ್ಯಾಯಧೀಶರು ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸದ್ಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವರ್ತೂರು ಸಂತೋಷ್ ಅವರನ್ನು ಪರಪ್ಪನ ಅಗ್ರಹಾರಕ್ಕೆ ರವಾನೆ ಮಾಡಲಾಗಿದೆ. ಹೊಸೂರು ರಸ್ತೆಯಲ್ಲಿ ಮೂರು ವರ್ಷದ ಹಿಂದೆ ಖರೀದಿ ಮಾಡಿದ್ದಾರೆ. ಬಿಲ್ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಸದ್ಯ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕೋರ್ಟ್ ರಜೆ ಇರುವ ಹಿನ್ನೆಲೆ ಬುಧವಾರ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗುತ್ತೆ ಎಂದು ವಕೀಲ ಕೆ. ನಟರಾಜ್ ಹೇಳಿಕೆ ನೀಡಿದ್ದಾರೆ.