ದಸರಾ ಜಂಬೂ ಸವಾರಿಗೆ ಗಮಿಸಿದ್ದ ಸಕ್ರೆಬೈಲಿನ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಸೋಮವಾರ ರಾತ್ರಿ ನಗರದ ವಾಸವಿ ಶಾಲೆ ಆವರಣದಲ್ಲಿ ನೇತ್ರಾವತಿ ಆನೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿ ಎರಡು ಆರೋಗ್ಯವಾಗಿವೆ.
ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಸಾಗರ್, ಹೇಮಾವತಿ ಹಾಗೂ ನೇತ್ರಾವತಿ ಆನೆಗಳನ್ನು ಕರೆತರಲಾಗಿತ್ತು. ವಾಸವಿ ಶಾಲೆ ಆವರಣದಲ್ಲಿ ಆನೆಗಳು ತಂಗಿದ್ದವು. ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದ ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು, ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರೆಗ್ನೆನ್ಸಿ ಟೆಸ್ಟ್‌ನಲ್ಲಿ ನೇತ್ರಾವತಿ ಆನೆ ಗರ್ಭವತಿ ಎನ್ನುವುದು ಗೊತ್ತಾಗಿರಲಿಲ್ಲ. ಮೈಸೂರು ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆ ಸಂದರ್ಭ ನೇತ್ರಾವತಿ ಆನೆಯ ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಲಾಗಿತ್ತು. ಆಗ ನೇತ್ರಾವತಿ ಗರ್ಭವತಿ ಎನ್ನುವುದು ಗೊತ್ತಾಗಿರಲಿಲ್ಲ. ಅಲ್ಲದೇ ಶಿವಮೊಗ್ಗ ದಸರಾ ಹಿನ್ನೆಲೆಯಲ್ಲಿ ನೇತ್ರಾವತಿಯನ್ನು ಮೈಸೂರಿಗೆ ಕಳುಹಿಸಿರಲಿಲ್ಲ.
ಕಳೆದ 3 ದಿನದ ಹಿಂದೆ ಆನೆಗಳನ್ನು ಶಿವಮೊಗ್ಗಕ್ಕೆ ಕರೆ ತರಲಾಗಿತ್ತು. ಜಂಬೂ ಸವಾರಿಯ ತಾಲೀಮು ಸಹ ನಡೆಸಲಾಗಿತ್ತು. ತಾಲೀಮು ಮುಗಿಸಿಕೊಂಡು ಬಂದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ಮರಿಗೆ ಜನ್ಮ ನೀಡಿದ ನೇತ್ರಾವತಿ ಆನೆ ಹಾಗೂ ಮರಿಯನ್ನು ಸಕ್ರೆಬೈಲು ಬಿಡಾರಕ್ಕೆ ಕರೆದೊಯ್ಯಲಾಗಿದೆ. ನೇತ್ರಾವತಿ ಆನೆ ಗರ್ಭವತಿ ಆಗಿರುವುದು ಅರಣ್ಯ ಸಿಬ್ಬಂದಿಗೆ, ವೈದ್ಯರಿಗೆ ತಿಳಿಯದಿರುವುದು ಆಶ್ಚರ್ಯ ಉಂಟು ಮಾಡಿದೆ. ಗರ್ಭವತಿಯಾಗಿದ್ದ ಆನೆಯನ್ನು ದಸರಾ ಜಂಬೂ ಸವಾರಿ ತಾಲೀಮಿನಲ್ಲಿ ಬಳಸಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.