ಕೋವಿಡ್ 19 ಮಹಾಮಾರಿಯಿಂದ ಆದಂತಹ ಅವಾಂತರಗಳು ಒಂದಾ ಎರಡಾ. ಇದೀಗಾ ಈ ಕೋವಿಡ್ ಬಂದು ಹೋದವರಲ್ಲಿ ಹೃದಯಾಘಾತದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ ಅಂತ ಕೇಂದ್ರ ಆರೋಗ್ಯ ಸಚಿವರು ಶಾಕಿಂಗ್ ಹೇಳಿಕೆಯನ್ನ ಕೊಟ್ಟಿದ್ದಾರೆ. ಅಲ್ಲದೇ ಹೆಚ್ಚು ಶ್ರಮದ ಕೆಲಸ ಮಾಡಿದ್ರೆ ಹೃದಯಾಘಾತ ಸಾಧ್ಯತೆ ಇದ್ದು, ಯುವಕರಲ್ಲಿ ಹೆಚ್ಚಾಗಿ ಹೃದಯಾಘಾತದ ಸಮಸ್ಯೆಗಳು ಕಂಡುಬರುತ್ತಿವೆಯಂತೆ. ಈ ಕುರಿತು ಐಸಿಎಂಆರ್ ಅಧ್ಯಾಯನದಲ್ಲಿ ಮಾಹಿತಿ ಬಹಿರಂಗವಾಗಿದ್ಯಂತೆ.
ಇನ್ನು, ಈ ವರದಿ ಆಧಾರಿಸಿ ಐಸಿಎಂಆರ್ ಸಲಹೆ ಪಾಲಿಸುವಂತೆ ಕೇಂದ್ರ ಆರೋಗ್ಯ ಸಚಿವರು ಮನವಿ ಮಾಡಿದ್ದು, ಕೊವೀಡ್ ಬಂದು ವಾಸಿಯಾದವರು ಒಂದೆರೆಡು ವರ್ಷ ಜಿಮ್ ಸೇರಿದಂತೆ ಭಾರ ಎತ್ತಿ ಶ್ರಮ ಹಾಕಿ ಕೆಲಸ ಮಾಡಬೇಡಿ ಎಂದಿದೆ. ಜೊತೆಗೆ ಯುವಕರಲ್ಲಿ ಹೃದಯಾಘಾತ ಹೆಚ್ಚಳವಾಗಿರುವ ಬಗ್ಗೆಯು ಐಸಿಎಂಆರ್ ಅಧ್ಯಯನಕ್ಕೆ ಮುಂದಾಗಿದೆ.
ಇತ್ತೀಚೆಗೆ ನವರಾತ್ರಿ ವೇಳೆ ಗುಜರಾತ್ ನಲ್ಲಿ ನೃತ್ಯ ಮಾಡುವಾಗ ಒಂದೇ ದಿನ 10 ಯುವಕರು ಮೃತಪಟ್ಟಿದ್ದರು. ಅಲ್ಲದೇ ದೇಶದ ಇತರೆ ರಾಜ್ಯಗಳಲ್ಲೂ ಯುವಕರ ಹೃದಯಾಘಾತ ಸಂಖ್ಯೆ ಹೆಚ್ಚಳ ಆಗಿತ್ತು. ಈ ಎಲ್ಲಾ ಬೆಳವಣಿಗೆ ಆಧಾರಿಸಿ ಐಸಿಎಂಆರ್ ಅಧ್ಯಾಯನಕ್ಕೆ ಮುಂದಾಗಿದ್ದು ಕೋವಿಡ್ ಬಂದು ಹೋದವರು ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕ ಸಿ ಎನ್ ಮಂಜುನಾಥ್ ಅವರನ್ನ ಪ್ರಶ್ನಿಸಿದ್ದಕ್ಕೆ ಕಳೆದ 10 ವರ್ಷದಲ್ಲಿ 22% ರಷ್ಡು ಹೃದಯಾಘಾತ ಜಾಸ್ತಿಯಾಗಿದೆ. ಕೋವಿಡ್ ಬಂದು ಎರಡು ವರ್ಷಗಳಾಗಿವೆ. ಕೋವಿಡ್ ಲಸಿಕೆಯಿಂದ ಯಾವುದೇ ಹೃದಯಾಘಾತ ಜಾಸ್ತಿಯಾಗಿಲ್ಲ. ಕೋವಿಡ್ ಬಂದವರು ಹೆಚ್ಚು ಕೆಲಸ ಮಾಡಬಾರದು, ಜಿಮ್ ಮಾಡಬಾರದು ಎನ್ನುವ ಬಗ್ಗೆ ಯಾವುದೇ ಅಧ್ಯಾಯನ ಮಾಡಿಲ್ಲ. ನಾವು 18 ವರ್ಷದಿಂದ 40 ವರ್ಷದ ಜನರಲ್ಲಿ ಅಧ್ಯಾಯನ ಮಾಡಿದ್ವಿ. ಅದ್ರಲ್ಲಿ ಮಹಿಳೆಯರಲ್ಲಿಯೂ ಕೂಡ ಹೃದಯಾಘಾತ ಹೆಚ್ಚಾಗಿರುವುದು ಕಂಡುಬಂದಿದೆ. 57% ರಷ್ಡು ಧೂಮಪಾನ ಮಾಡಿದವರಲ್ಲಿ ಹೃದಯಾಘಾತ ಕಂಡುಬಂದಿತ್ತು. ಶೇ 25 ರಷ್ಟು ಜನರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಇದ್ದರೂ ಹೃದಯಾಘಾತ ಹೆಚ್ಚಾಗಿತ್ತು. ಯುವಕರು ಹೆಚ್ಚು ಕೆಲಸ ಮಾಡಬಾರದು ಎನ್ನುವುದರ ಬಗ್ಗೆ ಯಾವುದೇ ಅಧ್ಯಾಯನ ಮಾಡಿಲ್ಲ. ಅತಿಹೆಚ್ಚು ಕೆಲಸ ಮಾಡಿದ್ರೆ ಅಧಿಕ ರಕ್ತದ ಒತ್ತಡ, ಹೃದಯಾಘಾತದಂತಹ ಕಾಣಿಸಿಕೊಳ್ಳಬಹುದು. ಆದ್ರೆ, ಕಠಿಣ ಕೆಲಸಗಳನ್ನ ಮಾಡಲೇ ಬಾರದು ಅಂದ್ರೆ ಕಷ್ಟ.
ನಿಗಧಿತ ಅವಧಿಗಿಂತ ಎರಡು ಗಂಟೆಗಳು ಹೆಚ್ಚು ಕೆಲಸ ಮಾಡಿದ್ರೆ ಏನೂ ಸಮಸ್ಯೆ ಇಲ್ಲ. ಆದ್ರೆ ಇದನ್ನ ಮೀರಿ ಹೆಚ್ಚು ಕೆಲಸ ಮಾಡುವುದು ಸರಿಯಲ್ಲ. ಮಾಲಿನ್ಯದಿಂದಲೂ ಹೃದಯಾಘಾತ ಸಮಸ್ಯೆ ಜಾಸ್ತಿಯಾಗಿದೆ. ಜಿಮ್ ಗಳಲ್ಲಿ ಅವರ ತೂಕಕ್ಕೆ ತಕ್ಕಂತೆ ತೂಕಗಳನ್ನ ಎತ್ತಬೇಕು. ಜಿಮ್ ಮಾಡುವುದು ಕೆಟ್ಟದಲ್ಲ. ಆದ್ರೆ ಜಿಮ್ ಗಳಿಗೆ ಹೋಗುವುದಕ್ಕೆ ಮೊದಲು ಕಾರ್ಡಿಯಾಕ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಅತಿಯಾಗಿ ವರ್ಕೌಟ್ ಮಾಡುವುದು ಆರೋಗ್ಯದ ಮೇಲೆ ಪೆರಿಣಾಮ ಬೀರಲಿದೆ. ವೈದ್ಯರ ಆಯಸ್ಸು ಇತ್ತೀಚಿಗೆ 10 ವರ್ಷ ಕಡಿಮೆಯಾಗುತ್ತಿದೆ. ಇತ್ತೀಚಿಗೆ ಜನರ ಅಪೇಕ್ಷೆಗಳು ಜಾಸ್ತಿಯಾದಂತೆ ವೈದ್ಯರ ಮೇಲೆ ಹೆಚ್ಚು ಒತ್ತಡ ಬೀರುತ್ತಿದೆ. ಇದರ ಪರಿಣಾಮ ವೈದ್ಯರ ಆಯಸ್ಸು 10 ವರ್ಷ ಕಡಿಮೆಯಾಗಿದೆ. ವಾಯುಮಾಲಿನ್ಯ, ಅತಿಯಾದ ಒತ್ತಡ, ರೆಸ್ಟ್ ಲೆಸ್ ಕೆಲಸ, ಸಕ್ಕರೆ ಕಾಯಿಲೆ, ಥೈರಾಯ್ಡ್ ಸಮಸ್ಯೆ, ಪಿಒಸಿಡಿ, ರಕ್ತ ಹೆಪ್ಪು ಕಟ್ಟುವ ಅಂಶ, ಫ್ಯಾಟಿ ಲಿವರ್, ಕೊಕ್ಕೇನ್, ಹುಕ್ಕಾ ಬಾರ್, ಇವೆಲ್ಲವೂ ಹೃದಯಘಾತಕ್ಕೆ ಕಾರಣವಾಗುತ್ತಿದೆ ಎಂದರು.
ಇನ್ನು, ಈ ಕುರಿತಾಗಿ ಮಾತಾನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಒತ್ತಡದಲ್ಲಿ ಕೆಲಸ ಮಾಡೋರಿಗೆ ಹೃದಯಾಘಾತ ಹೆಚ್ಚಿರುತ್ತದೆ. ಈ ಡ್ರೈವರ್ಸ ಒತ್ತಡ ದಲ್ಲಿ ಕೆಲಸ ಮಾಡ್ತಿರ್ತಾರೆ. ವ್ಯಾಯಾಮ ಏನು ಇರಲ್ಲ. ಹೀಗಾಗಿ ಹೃದಯಾಘಾತ ಹೆಚ್ಚಿರಬಹುದು. ಕೋವಿಡ್ ಬಂದವರು ಹೆಚ್ಚು ಶ್ರಮದ ಕೆಲಸ ಮಾಡಬಾರದು ಎನ್ನುವುದಕ್ಕೆ ಕೇಂದ್ರ ಆರೋಗ್ಯ ಸಚಿವರು ಯಾವ ಆಧಾರದ ಮೇಲೆ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ. ಇದಕ್ಕೆ ಯಾವ ವೈಜ್ಞಾನಿಕ ಆಧಾರ ಇಲ್ಲ. ನನಗೂ ಕೋವಿಡ್ ಬಂದಿತ್ತು. ಕೋವಿಡ್ ಬಂದವರು ಶ್ರಮದ ಕೆಲಸ ಮಾಡಬಾರದು ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದರು.
ಜಿಮ್ ಮಾಲೀಕರು ಸಹ ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯನ್ನ ವಿರೋಧಿಸುತ್ತಿದ್ದಾರೆ. ಕೋವಿಡ್ ನಿಂದಾಗಿ ಜಿಮ್ ಗಳು ನೆಲ ಕಚ್ಚಿವೆ. ಇದೀಗಾ ಜಿಮ್ ಗೆ ಹೋಗ್ಬೇಡಿ ಅಂದ್ರೆ ತುಂಬ ಕಷ್ಟ. ಇದರಿಂದ ಜಿಮ್ ಮಾಲೀಕರಿಗೆ ಸಮಸ್ಯೆಯಾಗಲಿದೆ ಎಂದಿದ್ದಾರೆ.
ಒಟ್ನಲ್ಲಿ, ಕೊರೊನಾ ಕಡಿಮೆಯಾಯ್ತು ಎನ್ನುವಷ್ಟರಲ್ಲಿ ಇದೀಗಾ ಕೇಂದ್ರ ಆರೋಗ್ಯ ಸಚಿವರು ಕೊಟ್ಟಿರುವ ಹೇಳಿಕೆ ಸಂಚಲನ ಮೂಡಿಸಿದ್ದು, ಸಾಮಾನ್ಯ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರುವುದು ಮಾತ್ರ ಸುಳ್ಳಲ್ಲ.