ಕಪ್ಪು ಕಲ್ಲು ಗಣಿಗಾರಿಕೆ ನಿರ್ಜನ ಪ್ರದೇಶದಲ್ಲಿ ಅನುಮತಿ ಪಡೆದು ನಡೆಸುವುದು ಸಾಮಾನ್ಯ. ಆದರೆ ಈ ಊರಿನಲ್ಲಿ ಜನ ವಸತಿ ಪ್ರದೇಶದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ಆರ್ಭಟಿಸುತ್ತಿದೆ. ಕಟ್ಟಡಗಳು ಬಿರುಕು ಬಿಟ್ಟು, ಸ್ಫೋಟದ ಸದ್ದಿಗೆ ಅಂಗನವಾಡಿಯ ಪುಣಾಣಿ ಮಕ್ಕಳು ಬೆದರುತ್ತಿದ್ದಾರೆ. ಈ ಬಗ್ಗೆ ಜನ ಪ್ರತಿನಿಧಿಗಳಿಗೆ ದೂರು ನೀಡಿದ್ರೂ ಅಧಿಕಾರಿಗಳು ದಾಳಿ ನಡೆಸಿದ್ರೂ ಗಣಿಗಾರಿಕೆ ಮಾತ್ರ ಶಾಶ್ವತವಾಗಿ ಮುಚ್ಚುತ್ತಿಲ್ಲ.
ಅಕ್ರಮ ಕಲ್ಲುಗಾರಿಕೆಯಿಂದ ಈ ಊರೇ ನಲುಗಿ ಹೋಗಿದೆ. ಮನೆ, ಮಸೀದಿ ಅಂಗನವಾಡಿ ಬಿರುಕು ಬಿಟ್ಟಿದೆ. ಗಣಿಗಾರಿಕೆ ಸ್ಫೋಟದಿಂದ ಪುಟ್ಟ ಮಕ್ಕಳು ಭಯಪಡುವಂತಾಗಿದೆ. ಮಂಗಳೂರು ಹೊರ ವಲಯದ ನೀರು ಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿತ್‍ಪಾದೆಯಲ್ಲಿ ಜನವಸತಿ ಪ್ರದೇಶದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ಆರ್ಭಟಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಬಿತ್‍ಪಾದೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದೆ. ಹತ್ತು ಮೀಟರ್ ದೂರದಲ್ಲೇ ಅಂಗನವಾಡಿ ಇದ್ದು, ಪುಟ್ಟ ಕಂದಮ್ಮಗಳು ಬೆದರುತ್ತಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಊರವರು ಜನಪ್ರತಿನಿಧಿಗಳಿಗೆ ದೂರು ನೀಡಿದಾಗ ತಾತ್ಕಾಲಿಕವಾಗಿ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತ ಮಾಡುತ್ತಾರೆ.. ಊರವರ ಕೋಪ ತಣ್ಣಗಾದಾಗ ಮತ್ತೆ ಗಣಿಗಾರಿಕೆ ಶುರುವಾಗುತ್ತೆ.
ಅಕ್ರಮ ಕಲ್ಲು ಗಣಿಗಾರಿಕೆಯಿಂದ ಊರವರು ರೋಸಿ ಹೋಗಿದ್ದಾರೆ.. ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುವ ಬದಲು ಶಾಶ್ವತ ತಡೆಗೆ ಆಗ್ರಹಿಸಿದ್ದಾರೆ. ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸದೇ ಇದ್ರೆ ದೊಡ್ಡ ಹೋರಾಟ ನಡೆಸುದಾಗಿ ಎಚ್ಚರಿಕೆ ನೀಡಿದ್ದಾರೆ.