ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಪಾತಕಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದು, ಈ ವೇಳೆ ಸ್ಥಳೀಯ ಆಟೋ ಡ್ರೈವರ್ ಪೊಲೀಸರಿಗೆ ಕೊಲೆಗಡುಕನ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಕೊಲೆ ಪ್ರಕರಣಕ್ಕೆ ಪೊಲೀಸರಿಗೆ ರೋಚಕ ಸುಳಿವೊಂದು ಸಿಕ್ಕಂತಾಗಿದೆ.
ಉಡುಪಿ ಜಿಲ್ಲೆ ಮಲ್ಪೆ ಠಾಣಾ ವ್ಯಾಪ್ತಿಯ ತೃಪ್ತಿನಗರದಲ್ಲಿ ಇಂದು ಬೆಳಗ್ಗೆ (ಭಾನುವಾರ) ನಡೆದಿದೆ. ಹಸೀನಾ(46), ಅಫ್ನಾನ್(23), ಅಯ್ನಾಝ್(21) ಹಾಗೂ ಆಸಿಂ(12) ಎಂಬುವರನ್ನ ದುಷ್ಕರ್ಮಿ ಚೂರಿಯಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ. ಒಂದೇ ಘಟನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನ ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆಯ ಹಿಂದೆ ವಿವಿಧ ಆಯಾಮಗಳ ಅನುಮಾನವನ್ನು ವ್ಯಕ್ತಪಡಿಸಿ ಕೊಲೆ ಪಾತಕಿಯ ಶೋಧಕ್ಕೆ ಮುಂದಾಗಿದ್ದಾರೆ. ಜೊತೆಗೆ, ಇದು ಕುಟುಂಬದಲ್ಲಿ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಕುಕೃತ್ಯ ಎಂಬುದನ್ನು ತಿಳಿಸಿದ್ದರು. ಈಗ ಆಟೋ ಚಾಲಕನೊಬ್ಬ ಕೊಲೆಗಡುಕನನ್ನು ನೋಡಿದ್ದು, ಈ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದಾನೆ.
ಆಟೋ ಡ್ರೈವರ್ ಹೇಳಿದ್ದೇನು?
ಸಂತೆಕಟ್ಟೆಯ ರಿಕ್ಷಾ ಚಾಲಕ ಶ್ಯಾಮ್ ಅವರು, ಕೊಲೆಯ ಆರೋಪಿ ನನ್ನ ಆಟೋದಲ್ಲಿ ಮನೆಗೆ ತೆರಳಿದ್ದಾನೆ. ಸಂತೆ ಕಟ್ಟೆಯಿಂದ ಈಗ ಕೊಲೆ ನಡೆದಿರುವ ಘಟನೆಯ ಮನೆಯ ವಿಳಾಸವನ್ನು ಆರೋಪಿ ಸರಿಯಾಗಿ ಹೇಳಿದ್ದನು. ನಾನು ಹೋಗುವಾಗ ದಾರಿ ತಪ್ಪಿದಾಗ ಆತನೇ ಈ ದಾರಿಯಲ್ಲ, ಪಕ್ಕದ ರಸ್ತೆಯಲ್ಲಿ ಹೋಗಬೇಕು ಎಂದು ಸೀದಾ ಮನೆಯ ಬಳಿ ಕರೆದುಕೊಂಡು ಹೋಗಿದ್ದನು. ಇನ್ನು ಆಟೋವನ್ನು ಹತ್ತಿದ ವ್ಯಕ್ತಿಗೆ ಸುಮಾರು 45 ವರ್ಷ ವಯಸ್ಸಾಗಿರಬಹುದು. ಬ್ರೌನ್ ಕಲರ್ ಅಂಗಿ ಹಾಗೂ ಮುಖಕ್ಕೆ ಬಿಳಿ ಬಣ್ಣದ ಮಾಸ್ಕ್ ಧರಿಸಿದ್ದನು. ಅವನು ಹೇಳಿದಂತೆ ನಾನು ಮನೆಯ ಬಳಿ ಬಿಟ್ಟು ಹೋದೆನು ಎಂದು ಹೇಳಿದ್ದಾನೆ.
ಮನೆಗೆ ಹೋಗಿ 15 ನಿಮಿಷದಲ್ಲಿ ವಾಪಸ್ ಬಂದಿದ್ದ..!!
ಕೊಲೆಯ ಆರೋಪಿ ಎಂದು ಹೇಳಲಾಗುವ ವ್ಯಕ್ತಿಯನ್ನು ನಾನು ಮನೆಯ ಬಳಿ ಬಿಟ್ಟು 15 ನಿಮಿಷದಲ್ಲಿ ಪುನಃ ಸಂತೆಕಟ್ಟೆಯ ಸ್ಟ್ಯಾಂಡ್ಗೆ ಬಂದಿದ್ದನು. ಅಲ್ಲಿಂದ ತನ್ನನ್ನು ಕರೆದುಕೊಂಡು ಹೋಗುವಂತೆ ಗಡಿಬಿಡಿಯಲ್ಲಿ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದನು. ಆಗ ಅಲ್ಲಿಂದ ಬೇರೊಂದು ಸ್ಥಳಕ್ಕೆ ತೆರಳಿದ್ದನು. ಅವನು ಬೆಂಗಳೂರು ಕನ್ನಡವನ್ನು ಮಾತನಾಡುತ್ತಿದ್ದನು. ಈತ ಮನೆಯ ಪರಿಚಿತನೇ ಇರಬೇಕು ಎಂದು ಆಟೋ ಚಾಲಕ ಶ್ಯಾಮ್ ಮಾಹಿತಿ ನೀಡಿದ್ದಾರೆ.