ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಪುತ್ತೂರಿನಲ್ಲಿ ಸೃಷ್ಟಿಯಾದ ಬಂಡಾಯದ ಬೆಂಕಿ ತಣ್ಣಗಾಗಿಸಲು ಪ್ರಯತ್ನ ನಡೆದಿರುವ ಮಧ್ಯೆಯೇ ಅದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದರಾ ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ? ಹೀಗೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಉದ್ಭವವಾಗಿದೆ. ಇದಕ್ಕೆ ಕಾರಣವಿಷ್ಟೇ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿರುವ ಅವರು, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ, ಮತ್ತೆ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸಿಕೊಡಿ ಎಂದ ಮನವಿ ಮಾಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿತನದ ಬಗ್ಗೆ ಸ್ವಪಕ್ಷೀಯರಲ್ಲೇ ತೀವ್ರ ವಿರೋಧ ಇರುವ ಮಧ್ಯೆಯೇ ವಿಜಯೇಂದ್ರ ಈ ರೀತಿ ಕರೆ ನೀಡಿರುವುದು ಕುತೂಹಲ ಸೃಷ್ಟಿಸಿದೆ.
ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಜಯೇಂದ್ರ, ಮುಂದಿನ ಲೋಕಸಭಾ ಚುನಾವಣೆಯನ್ನ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮತ್ತೊಮ್ಮೆ ನಮ್ಮ ಪಕ್ಷದ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಅರುಣ್ ಕುಮಾರ್ ಪುತ್ತಿಲ ಅವರ ಬಂಡಾಯದಿಂದ ಸದ್ಯ ದಕ್ಷಿಣ ಕನ್ನಡ ಜಿಲ್ಲೆ ಭಾರೀ ಸುದ್ದಿಯಲ್ಲಿದೆ. ಇವರು ಮಾತ್ರವಲ್ಲದೆ, ಹಲವು ಮಂದಿ ಸಂಸದ ಸ್ಥಾನದ ಟಿಕೆಟ್ ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ, ಮತ್ತೆ ನಳಿನ್ ಗೆಲ್ಲಿಸಿ ಎಂದ ವಿಜಯೇಂದ್ರ ಕರೆಕೊಟ್ಟಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ
ಪರಶುರಾಮ ಸೃಷ್ಟಿಯ ನಾಡು, ಕಂಬಳದ ಬೀಡು ಮಂಗಳೂರಿನ ಜನರಿಗೆ ನಮಸ್ಕಾರಗಳು ಎಂದು ಮಾತು ಆರಂಭಿಸಿದ ವಿಜಯೇಂದ್ರ, ನನಗೆ ಯಡಿಯೂರಪ್ಪ ಮಗ ಅಂತ ಜವಾಬ್ದಾರಿ ಕೊಟ್ಟಿಲ್ಲ. ಕೆಲಸ ಗುರುತಿಸಿ ಹೈಕಮಾಂಡ್ ಈ ಜವಾಬ್ದಾರಿ ಕೊಟ್ಟಿದೆ. ಯಡಿಯೂರಪ್ಪ, ಅನಂತ್ ಕುಮಾರ್ ಸೇರಿ ಹಲವು ನಾಯಕರ ಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ಬೆಳೆದಿದೆ. ಆದರೆ ಕಾಂಗ್ರೆಸ್ ಮೊನ್ನೆ ಚುನಾವಣೆ ವೇಳೆ ಒಂದು ಸುಳ್ಳನ್ನು ಹತ್ತಾರು ಬಾರಿ ಹೇಳಿ ಅಧಿಕಾರ ಪಡೆದಿದೆ. ಅಧಿಕಾರಕ್ಕೆ ಬಂದ ಹೊಸ ಸರ್ಕಾರದ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ನಿರೀಕ್ಷೆ ಹುಸಿಯಾಗಿದೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾ ಮನೋಭಾವದಿಂದ ಮೊನ್ನೆ ಭಾರತದ ಪರ ಸ್ಟೇಡಿಯಂಗೆ ತೆರಳಿದ್ದರು. ಆದರೆ ಪುಣ್ಯಾತ್ಮ ರಾಹುಲ್ ಗಾಂಧಿ ಅದು ಅಪಶಕುನ ಎನ್ನುತ್ತಾರೆ. ಆದರೆ ನಾವು ರಾಹು ಕಾಲದಲ್ಲಿ ಯಾವುದೇ ಶುಭ ಕಾರ್ಯ ಮಾಡಲ್ಲ. ಆದರೆ ಕಾಂಗ್ರೆಸ್ ಪಕ್ಷದ ನಾಯಕನ ಹೆಸರು ರಾಹುಲ್ ಗಾಂಧಿ. ರಾಹುಕಾಲ ಮತ್ತು ರಾಹುಲ್ ಗಾಂಧಿಗೆ ಯಾವುದೇ ವ್ಯತ್ಯಾಸ ಇಲ್ಲ. ರಾಹುಲ್ ಗಾಂಧಿ ಪಕ್ಷದ ಅಧಿಕಾರ ಪಡೆದ ಬಳಿಕ ಅವರಿಗೆ ರಾಹುಕಾಲ ಶುರುವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಕೆ 28 ಸಂಸದರನ್ನ ನಾವು ಕಳುಸ್ತೇವೆ. ಇಡೀ ವಿಶ್ವ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಸಾಗ್ತಿದೆ ಎಂದು ವಿಜಯೇಂದ್ರ ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದ ರಾಜಕೀಯ ಇತಿಹಾಸದಲ್ಲಿ ಆರೇ ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದೆ. ಸಿದ್ದರಾಮಯ್ಯ, ಡಿಕೆಶಿ ಕೂತಲ್ಲಿ ನಿಂತಲ್ಲಿ ಮೋದಿ ಅವರನ್ನು ಟೀಕಿಸ್ತಾರೆ. ಇವರ ಯೋಗ್ಯತೆಗೆ ಬರ ನಿಯಂತ್ರಣ ಮಾಡಲು ಆಗಿಲ್ಲ. ರಾಜ್ಯದ ಬರಗಾಲದ ಹೊತ್ತಲ್ಲಿ ಸಚಿವರಿಗೆ ಐಶಾರಾಮಿ ಕಾರು ಕೊಟ್ಟಿದ್ದಾರೆ. ಅದರ ಜೊತೆಗೆ ಸಿಎಂ ನಿವಾಸ ಕೋಟ್ಯಾಂತರ ಖರ್ಚಿನಲ್ಲಿ ನವೀಕರಣ ಮಾಡಿದ್ದಾರೆ ಎಂದು ಅವರು ದೂರಿದರು.
ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ನುಗ್ಗಿ ಅಲ್ಪಸಂಖ್ಯಾತರು ಬೆಂಕಿ ಹಚ್ಚಿದ್ರು. ಆದರೆ ಓಲೈಕೆ ರಾಜಕಾರಣಿ ಡಿಕೆಶಿ ಆ ಬಗ್ಗೆ ಮಾತನಾಡಲೇ ಇಲ್ಲ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ, ಆದರೆ ನಮ್ಮಲ್ಲಿ ದೇಶದ್ರೋಹ ಕೆಲಸ ಮಾಡೋರನ್ನ ಕ್ಷಮಿಸಲ್ಲ. ಜಮೀರ್ ಅಹ್ಮದ್ ಖಾನ್ ರದ್ದು ಎಂಥಾ ದುರಾಹಂಕರದ ಮಾತು. ಸಭಾಧ್ಯಕ್ಚರ ಸ್ಥಾನಕ್ಕೂ ಅಗೌರವ ಮಾಡೋ ಕೆಲಸ ಆಗಿದೆ. ಸಿಎಂ ಅಥವಾ ಡಿಕೆಶಿ ಇದನ್ನ ವಿರೋಧಿಸಿಲ್ಲ. ಜಮೀರ್ ಅಹ್ಮದ್ ವಿಧಾನಸಭೆಗೆ ಕಾಲಿಡಲು ನಾವು ಬಿಡಲ್ಲ. ಈ ಭರವಸೆಯನ್ನ ನಾನು ನಿಮಗೆ ಇಲ್ಲಿ ಕೊಡ್ತೇನೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಮತ್ತು ರಾಜ್ಯದ ಅಧ್ಯಕ್ಷರಿಗೆ ಕೊಡೋ ಗೌರವ ಬೂತ್ ಅಧ್ಯಕ್ಷರಿಗೂ ಕೊಡಬೇಕು. ನನ್ನ ಜಿಲ್ಲಾ ಪ್ರವಾಸದ ವೇಳೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ದ ರಸ್ತೆಗಿಳಿದು ಹೋರಾಟ ಮಾಡಬೇಕಿದೆ. ಮುಂದಿನ ಬಾರಿಯೂ ನಳಿನ್ ಪರವಾಗಿ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ನನ್ನ ಅಧಿಕಾರದ ಕೊನೆಯ ದಿನದವರೆಗೂ ಪಕ್ಷದಲ್ಲಿ ಕೆಲಸ ಮಾಡ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ತರ್ತೇನೆ ಎಂದು ವಿಜಯೇಂದ್ರ ಹೇಳಿದರು.