ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ನ. 25ರಂದು 76ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಜನ್ಮದಿನದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಶುಭಾಶಯ ಸಲ್ಲಿಸಲಿದ್ದಾರೆ.
ದೇವಸ್ಥಾನದ ನೌಕರರು, ಊರಿನ ನಾಗರಿಕರು, ಕ್ಷೇತ್ರದ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ಸಂಸ್ಥೆಗಳ ಸಿಬಂದಿಯಿಂದ ವಿಶೇಷ ಗೌರವ ಸಲ್ಲಿಕೆಯಾಗಲಿದೆ. ಡಾ|ಹೆಗ್ಗಡೆ ಅವರು 1948ರ ನ.25ರಂದು ಜನಿಸಿದ್ದು, 1964ರ ಅ.24ರಂದು ಕ್ಷೇತ್ರದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿದ್ದರು.
ಬಳಿಕ ಧರ್ಮಸ್ಥಳದ ಸೇವಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೇ ನಡೆದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವ ಉದ್ಯೋಗ ತರಬೇತಿ ಕೇಂದ್ರಗಳು, ಸಿರಿ ಸಂಸ್ಥೆಗಳು, ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸೇವೆ, ವಿದ್ಯಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ಪ್ರಸ್ತುತ ಉಜಿರೆ ಸೇರಿದಂತೆ ಮಂಗಳೂರು, ಮೈಸೂರು, ಧಾರವಾಡ, ಬೆಂಗಳೂರು, ಉಡುಪಿ ಮೊದಲಾದ ಕಡೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಜತೆಗೆ ಆರೋಗ್ಯ, ಧಾರ್ಮಿಕ ಕ್ಷೇತ್ರ, ಜಲ ಸಂಪನ್ಮೂಲ ಅಭಿವೃದ್ಧಿ ಹೀಗೆ ಸರ್ವಸ್ಪರ್ಶಿ ಸೇವಾ ಕಾರ್ಯಗಳು ಧರ್ಮಸ್ಥಳ ಕ್ಷೇತ್ರದ ಜತೆಗೆ ಡಾ| ಹೆಗ್ಗಡೆ ಅವರಿಗೂ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿವೆ.