ಳ್ತಂಗಡಿ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 1954ರಲ್ಲಿ ಆರಂಭಗೊಂಡ ಕುತ್ಲೂರು ಶಾಲೆ. 2004ರಲ್ಲಿ ಶಾಲಾ ಸುವರ್ಣ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು. ನಂತರದ ದಿನಗಳಲ್ಲಿ ಶಾಲೆಯು ಅನೇಕ ಏಳು ಬೀಳುಗಳನ್ನು ಕಂಡಿದ್ದು, 2018ರಲ್ಲಿ ಶಾಲೆಯ ಮಕ್ಕಳ ಸಂಖ್ಯೆ 43ಕ್ಕೆ ಮುಟ್ಟಿತು. ಈ ಪರಿಸ್ಥಿತಿಯನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿತು.
ಬಳಿಕ ಈ ಶಾಲೆಯ ಚಿತ್ರಣ ಬದಲಾವಣೆಯಾಯಿತು. ಸರಕಾರಿ ಶಾಲೆಯ ಗುಣಮಟ್ಟವನ್ನು ಹೆಚ್ಚಿಸಿ, ಶೈಕ್ಷಣಿಕ ಸೌಲಭ್ಯಗಳು ಹೆಚ್ಚು ದೊರೆಯುವಂತೆ ಮಾಡುವಲ್ಲಿ ಪತ್ರಕರ್ತರು ಮುತುವರ್ಜಿ ವಹಿಸಿದ್ದರು. ಪರಿಣಾಮವಾಗಿ ಕುತ್ಲೂರು ಶಾಲೆ ಪುನಶ್ಚೇತನ ಗೊಂಡಿತು. ವಿದ್ಯಾರ್ಥಿಗಳ ಸಂಖ್ಯೆ 100ರ ಗಡಿಯನ್ನು ದಾಟುವಂತಾಯಿತು. ಇದೀಗ ಈ ಶಾಲೆಯ ಪಾಳು ಬಿದ್ದ ಭೂಮಿಯಲ್ಲಿ ಅಡಿಕೆ ತೋಟ ನಿರ್ಮಾಣ ವಾಗಿದೆ. ಇದರೊಂದಿಗೆ ಈ ಶಾಲೆ ಆರ್ಥಿಕ ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿದೆ.
ಡಿ.2ರಂದು ಬೆಳಗ್ಗೆ 11 ಗಂಟೆಗೆ ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ನೂತನವಾಗಿ ನಿರ್ಮಾಣಗೊಂಡಿರುವ ಅಡಿಕೆ ತೋಟದ ಸಮೃದ್ಧಿ ಸಿರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಲ್ಲಾಯಿ ಮುಗಿಲನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಡಾ|ಡಿ.ವೀರೇಂದ್ರ ಹೆಗ್ಗಡೆ ಯವರ ಆಪ್ತ ಸಹಾಯಕ ವೀರು ಶೆಟ್ಟಿ, ಎಂಆರ್ಪಿಎಲ್ ನ ಮಹಾಪ್ರಬಂಧಕ ರುಡಾಲ್ಫ್ ನೊರೋನ್ನಾ, ದಕ್ಷಿಣ ಕನ್ನಡ ಜಿಲ್ಲೆ ನಿರತ ಪತ್ರಕರ್ತರ ಸಂಘ ದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕುತ್ಲೂರು ಶಾಲೆಯ ಆರಂಭದ ದಿನಗಳು:
ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಇರುವ ಕುತ್ಲೂರು ಗ್ರಾಮದ ಪಾಂಡ್ಯಪ್ಪೆರೆ ಗುತ್ತಿನಲ್ಲಿ ಕೆ ಭುಜಬಲಿ ಹೆಗ್ಡೆ ಅವರ ಕಟ್ಟಡದಲ್ಲಿ, 1954ರ ಗಾಂಧಿ ಜಯಂತಿ ದಿನದಂದು ಕುತ್ಲೂರು ಶಾಲೆ ಆರಂಭವಾಯಿತು. ಮುಖ್ಯೋಪಾಧ್ಯಾಯರಾದ ಕೆ.ಸುಂದರ ಹೆಗ್ಡೆ ಯವರು ಈ ಶಾಲೆಯ ಸ್ಥಾಪಕರು.
ಅವರು ಮೂರು ವರ್ಷ ಈ ಶಾಲೆಯ ತರಗತಿಗಳನ್ನು ನಡೆಸಿದರು. ನಂತರ ಊರಿನವರ ಸಹಕಾರದಿಂದ ಸ್ವಂತ ಕಟ್ಟಡ ನಿರ್ಮಾಣವಾಗಿ 5ನೇ ತರಗತಿಯವರೆಗೆ ನಡೆಸಲು ಅನುಮತಿ ದೊರೆಯಿತು. ಜೂನ್ 15,1987ರಂದು ಆಗಿನ ಮುಖ್ಯೋಪಾಧ್ಯಾಯರಾದ ಕೆ.ಸಂಜೀವ ಹೆಗ್ಡೆ ಅವರ ಪ್ರಯತ್ನದಿಂದ 6ನೇ ಮತ್ತು 7ನೇ ತರಗತಿ ಪ್ರಾರಂಭಿಸಲಾಯಿತು.
2004ರಲ್ಲಿ ಶಾಲಾ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು. ನಂತರದ ದಿನಗಳಲ್ಲಿ ಶಾಲೆಯು ಅನೇಕ ಏಳು ಬೀಳುಗಳನ್ನು ಕಂಡಿದ್ದು, 2018ರಲ್ಲಿ ಶಾಲೆಯ ಮಕ್ಕಳ ಸಂಖ್ಯೆ 43ಕ್ಕೆ ತಲುಪಿ ಶಾಲೆ ಮುಚ್ಚುವ ವಾತವರಣ ಗ್ರಾಮಸ್ಥರಲ್ಲಿ ಕಳವಳ ವನ್ನುಂಟು ಮೂಡಿಸಿತ್ತು.
ಆ ದಿನಗಳಲ್ಲಿ ಅಪದ್ಭಾಂದವರಂತೆ ಬಂದವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರಿಯಾಶೀಲ ಪತ್ರಕರ್ತರನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಗ್ರಾಮೀಣ ಭಾಗದ ಶಾಲೆಯ ಬಗ್ಗೆ ಪತ್ರಕರ್ತರು ಕಾಳಜಿ ವಹಿಸಿ ನಮ್ಮ ಗ್ರಾಮಕ್ಕೆ ಭೇಟಿ ನೀಡಿದರು. ಬಳಿಕ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಈ ಶಾಲೆಯಲ್ಲಿ ನಡೆಸಿದರು. ಈ ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದರು. ಶಾಲೆಯ ಬಗ್ಗೆ ಗ್ರಾಮಸ್ಥರು ಶಾಸಕರಿಗೆ ಮನವಿ ನೀಡಿದರು. ಶಾಸಕರು ಕೂಡಲೇ ಕಾರ್ಯ ಪ್ರವೃತ್ತರಾಗಿ ಪೋಷಕರ ಸಭೆ ಕರೆದು ಶಾಲೆಯ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸಿ ಶಾಲೆಗೆ ಮೇಲ್ಚಾವಣಿ ದುರಸ್ತಿ, ಸುಣ್ಣ ಬಣ್ಣ ಮಾಡಿಸಿದರು. ಪತ್ರಕರ್ತರ ಸಂಘದವರು ಕಂಪ್ಯೂಟರ್, ಶಾಲಾ ಲೈಬ್ರರಿ ಮತ್ತು ಪೀಠೋಪಕರಣಗಳು, ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕಗಳನ್ನು ದಾನಿಗಳಿಂದ ಸಂಗ್ರಹಿಸಿ ಶಾಲೆಗೆ ನೀಡಿದರು. ಅಲ್ಲದೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಎರಡು ವರ್ಷ ಗೌರವ ಶಿಕ್ಷಕರನ್ನು ನೇಮಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಶಿಕ್ಷಕರನ್ನು ನೇಮಿಸಿದರು. ಬೆಳ್ತಂಗಡಿಯ ರೋಟರಿ ಕ್ಲಬ್ ವತಿಯಿಂದ 2022 ರಲ್ಲಿ ಉಚಿತ ಬರೆಯುವ ಪುಸ್ತಕ, ಶಾಲಾ ಸಮವಸ್ತ್ರ, ಶೂ ವಿತರಿಸಿದರು. ಬೆಳ್ತಂಗಡಿ ನೋಟರಿ ವಕೀಲರಾದ ಮುರಳಿ.ಬಿ ನಿರಂತರವಾಗಿ ಮೂರು ವರ್ಷ ಬರೆಯುವ ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಶಿಕ್ಷಣ ಪ್ರೇಮಿಗಳಿಂದ ಶಾಲೆಗೆ ಹಲವಾರು ಯೋಜನೆಗಳನ್ನು ತರುವಲ್ಲಿ ಶಾಲಾ ಅಭಿವೃದ್ಧಿ ಸಮಿತಿಯು ನಿರಂತರವಾಗಿ ಶ್ರಮಿಸುತ್ತಿದೆ.
ಆರ್ಥಿಕ ಸ್ವಾವಲಂಬನೆಯ ಹಾದಿಯಲ್ಲಿ ಕುತ್ಲೂರು ಶಾಲೆ:
ಶಾಲೆಯ ಜಾಗದಲ್ಲಿ ಶಾಲಾ ಅಭಿವೃದ್ಧಿಗೋಸ್ಕರ 386 ಅಡಿಕೆ ಮತ್ತು 25 ತೆಂಗಿನ ಗಿಡ ನಾಟಿ ಮಾಡಿ ಕೈತೋಟ ರಚಿಸಲಾಯಿತು. ಮಕ್ಕಳಿಗಾಗಿ ಚಿನ್ನರ ಅಂಗಳ ನಿರ್ಮಿಸಲಾಯಿತು ಇದರೊಂದಿಗೆ ಶಾಲೆ ಆರ್ಥಿಕ ಸ್ವಾವಲಂಬನೆ ಯತ್ತ ಹೆಜ್ಜೆ ಹಾಕಿದಂತಾಗಿದೆ. ಕಳೆದ ಮೂರು ವರ್ಷದಿಂದ ಸಾವಯವ ತರಕಾರಿ ತೋಟ ರಚಿಸಿ ಅಕ್ಷರ ದಾಸೋಹಕ್ಕೆ ಉಪಯೋಗವಾಗುತ್ತಿದೆ.
ಈ ವರ್ಷ ಶಾಲಾ ಅಭಿವೃದ್ಧಿ ಸಮಿತಿಯ ಮತ್ತು ಪೋಷಕರು ಸೇರಿ ಕುತ್ಲೂರಿನ ಸರಕಾರಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಚಿನ್ನರ ಅಂಗಳ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ನೆರವೇರಿಸಲಿದ್ದಾರೆ. ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.