ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಶವ ಪೊನ್ನಂಪೇಟೆಯ ಹೈಸೊಡ್ಲೂರು ಬಳಿಯ ಕೂಟಿಯಾಲ ಹೊಳೆಯಲ್ಲಿ ಪತ್ತೆಯಾಗಿದೆ.
ಹುದಿಕೇರಿ ಗ್ರಾಮದ ಅಶ್ವಿನಿ (48), ನಿಕಿತಾ (21) ಹಾಗೂ ನವ್ಯ (18) ಮೃತರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾಗಿ ಅಶ್ವಿನಿ ಸೇವೆ ಸಲ್ಲಿಸುತ್ತಿದ್ದರು. ಈ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಖಚಿತವಾಗಿಲ್ಲ.
ಮೂಲತಃ ಮಾದಾಪುರ ನಿವಾಸಿಯಾದ ಅಶ್ವಿನಿ, ಕಳೆದ ಆರು ವರ್ಷಗಳಿಂದ ಹುದಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಮೃತ ಅಶ್ವಿನಿಯ ಪತಿ ಮಂಡ್ಯ ಮೂಲದವರಾಗಿದ್ದು, ಮೈಸೂರಿನ ಹೋಟೆಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಹೈಸೊಡ್ಲೂರು ಬಳಿಯ ಐಗುಂದದಲ್ಲಿ ಒಂದು ಎಕರೆ ಕಾಫಿ ತೋಟವನ್ನು ಕೂಡ ಹೊಂದಿದ್ದರು.
ಶನಿವಾರ ಮಧ್ಯಾಹ್ನ ತಮ್ಮ ಸ್ಕೂಟರ್‍ನಲ್ಲಿ ಕಾಫಿ ತೋಟಕ್ಕೆ ತೆರಳಿರುವುದನ್ನು ಕೆಲವರು ನೋಡಿದ್ದಾರೆ. ಭಾನುವಾರ ಸಂಜೆ ಕೂಟಿಯಾಲ ಹೊಳೆ ಸಮೀಪ ತೆರಳಿದ ಕೆಲವರಿಗೆ ಮೃತದೇಹಗಳು ಕಾಣಿಸಿವೆ. ಸ್ಥಳಕ್ಕೆ ಶ್ರೀಮಂಗಲ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.