ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಕನಕದಾಸರ ಕೀರ್ತನ ಗಾಯನ ಮತ್ತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರು ಜ್ಯೋತಿ ಬೆಳಗಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ನುಡಿಗಳನ್ನಾಡಿದ ಡಾ. ಸುರೇಶ್ ಅವರು ಕನಕದಾಸರು ಜೀವನಮೌಲ್ಯ ಮತ್ತು ಭಕ್ತಿಯ ಮೂಲಕ ಜನಮನಸದಲ್ಲಿ ನೆಲೆ ನಿಂತಿರುವ ವ್ಯಕ್ತಿತ್ವದ ಕುರಿತು ಬಣ್ಣಿಸಿದರು. ಮುಕ್ತಿಯ ಮಾರ್ಗ ತೋರಿದ, ಭವಪಾಶ ನೀಗುವ ಮೂಲಕ ಬದುಕಿನ ದಾರಿ ತೋರಿಸಿದ ಆರಾಧ್ಯ ದೈವ ಆದಿಕೇಶವನಲ್ಲಿ ಗುರುವನ್ನು ಕಾಣುವ ಮೂಲಕ ಕನಕದಾಸರು ಜೀವನದ ಶ್ರೇಷ್ಠ ಮಾದರಿಯೊಂದನ್ನು ತಿಳಿಸಿಕೊಟ್ಟಿದ್ದಾರೆ. ಭಾರತೀಯ ದಾರ್ಶನಿಕತೆಯಲ್ಲಿ ಭಕ್ತಿ ಮತ್ತು ಗುರು ಪರಂಪರೆಯು ಜ್ಞಾನ ಮತ್ತು ಮುಕ್ತಿಯ ಮಾರ್ಗಕ್ಕಿರುವ ಶ್ರೇಷ್ಠ ಮೌಲ್ಯಗಳಾಗಿವೆ. ಕನಕದಾಸರು ಈ ಎರಡು ಮೌಲ್ಯಯುತ ಮಾರ್ಗಗಳನ್ನು ಅನುಸರಿಸಿ ಬೆಳೆದ ರೀತಿ ನಮಗೆಲ್ಲ ಮಾದರಿಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಕನಕದಾಸರ ‘ನಳಚರಿತ್ರೆ’ ಕುರಿತು ಉಪನ್ಯಾಸ ನೀಡಿದ ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ.ಸಿದ್ದಯ್ಯ ಅವರು ಕನಕದಾಸರು ಒಬ್ಬ ಸಾಮಂತ ಆಡಳಿತಾಧಿಕಾರಿಯಾಗಿ, ಯೋಧನಾಗಿ, ಭಕ್ತನಾಗಿ, ದಾಸನಾಗಿ, ದಾಸಶ್ರೇಷ್ಠನಾಗಿದ್ದಷ್ಟೇ ಅಲ್ಲದೆ ‘ನಳಚರಿತ್ರೆ’ ಯಂತಹ ಶೃಂಗಾರ ಪೂರ್ಣ ಆದರ್ಶ ದಾಂಪತ್ಯ ಕಾವ್ಯ ರಚಿಸುವ ಮೂಲಕ ಶ್ರೇಷ್ಠ ಕವಿಯಾಗಿಯೂ ಕೂಡ ಕಂಡುಬರುತ್ತಾರೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ ಡಾ.ಸೀತಾರಾಮ್ ಪಿ ಅವರು “ಕನಕದಾಸರ ಪೌರಾಣಿಕ ಮತ್ತು ಐತಿಹಾಸಿಕ ಪ್ರಜ್ಞೆ” ಕುರಿತು ವಿಚಾರಗಳನ್ನು ಮಂಡಿಸಿದರು. ಕನಕದಾಸರ ಬದುಕಿನ ಕಾಲಘಟ್ಟವು ಐತಿಹಾಸಿಕವಾಗಿ ವಿಜಯನಗರ ಸಾಮ್ರಾಜ್ಯದ ಔನ್ನತ್ಯ ಮತ್ತು ಅವನತಿ ಎರಡನ್ನು ಒಳಗೊಂಡಿದ್ದಷ್ಟೇ ಅಲ್ಲದೆ ಧಾರ್ಮಿಕವಾಗಿ ಶೈವ ವೈಷ್ಣವ ಮುಂತಾದ ಪಂಥಗಳ ಸಂಘರ್ಷ ಮತ್ತು ಸಮನ್ವಯಗಳಿಗೆ ಸಾಕ್ಷಿಯಾಗಿರುವ ಕಾಲಘಟ್ಟವಾಗಿದೆ. ಈ ಹಿನ್ನಲೆಯಲ್ಲಿ ಕನಕದಾಸರ ಬದುಕು ಮತ್ತು ಅಭಿವ್ಯಕ್ತಿ ತುಂಬಾ ಮಹತ್ವದ್ದಾಗಿದೆ. ಭಾರತೀಯ ಭಕ್ತಿ ಪರಂಪರೆಯ ಸ್ವತಂತ್ರವಾದ ಬೆಳವಣಿಗೆಗೆ ವೇದಿಕೆ ಒದಗಿಸಿಕೊಟ್ಟ ಕನಕದಾಸರು ಧಾರ್ಮಿಕವಾಗಿ ಅನೇಕ ಪಂಥಗಳು ಸಾಮರಸ್ಯದ ಬದುಕಿನ ಮಾದರಿಗಳನ್ನು ಅನುಸರಿಸಬೇಕಾಗಿರುವ ಅನಿವಾರ್ಯತೆಯನ್ನು ತಮ್ಮ ಕೀರ್ತನೆಗಳಲ್ಲಿ ವ್ಯಕ್ತಪಡಿಸಿದ್ದು ಮಹತ್ವದ್ದಾಗಿದೆ ಎಂದರು. ಪೌರಾಣಿಕ ಪಾತ್ರಗಳನ್ನು ಆದರ್ಶೀಕೃತ ನೆಲೆಯಲ್ಲಿ ಮರು ನಿರ್ವಚಿಸಿರುವ ಕನಕದಾಸರ ಪೌರಾಣಿಕ ಪ್ರಜ್ಞೆಯು ಶ್ರೇಷ್ಠ ಸೃಜನಶೀಲ ಕಲೆಯಾಗಿದೆ ಎಂದರು.
ವಿದ್ಯಾರ್ಥಿ ವೇದಿಕೆಯ ಮೂಲಕ “ಕನಕದಾಸರ ಕೀರ್ತನೆಗಳಲ್ಲಿ ಜೀವನ ಮೌಲ್ಯ” ಮತ್ತು “ಭಾರತೀಯ ಭಕ್ತಿಪಂಥ ಹಾಗೂ ಕನಕದಾಸರು” ಎಂಬ ವಿಷಯಗಳ ಕುರಿತು ವಿದ್ಯಾರ್ಥಿನಿಯರಾದ ಸುಮಿತ್ರ ಟಿ.ಎಚ್ ಹಾಗೂ ಮಧುಶ್ರೀ ನಾಯಕ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ದಿವ್ಯಶ್ರೀ ಜಿ, ಪಾವನಾ ರೈ ಹಾಗೂ ಅರ್ಥಶಾಸ್ತ್ರದ ಉಪನ್ಯಾಸಕರಾದ ಸಚಿನ್ ಗೌಡ ಎನ್.ಟಿ ಹಾಗೂ ವಿದ್ಯಾರ್ಥಿನಿಯರಾದ ಭವ್ಯಶ್ರೀ ಮತ್ತು ಮಧುಶ್ರೀ ಅವರ ತಂಡವು ಕನಕದಾಸರ ಕೀರ್ತನ ಗಾಯನವನ್ನು ಪ್ರಸ್ತುತಪಡಿಸಿದರು.
ಕನಕ ಜಯಂತಿ ಆಯೋಜನೆಯ ಆಶಯ ಹಾಗೂ ಕನಕದಾಸರ ಬದುಕು-ಬರಹ ಕುರಿತು ಕನ್ನಡ ಸಂಘದ ಸಂಚಾಲಕರಾದ ಶ್ರೀಮತಿ ಹೇಮಾವತಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನೂರಂದಪ್ಪ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿ ಕೌಶಲ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿನಿ ಅನುಪ್ರಿಯ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.