ಗೋಳಿತ್ತಟ್ಟು: ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳವನ್ನು ಅತ್ಯಂತ ಅರ್ಥ ಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ಮಕ್ಕಳಿಗೆ ಪ್ರಾಯೋಗಿಕವಾಗಿ ವ್ಯವಹಾರ ಕೌಶಲ್ಯವನ್ನು ಅಭಿವೃದ್ಧಿಗೊಳಿಸುವ ಸದುದ್ದೇಶದಿಂದ ಆಯೋಜಿಸಿದ ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದಿರುವ ವಿವಿಧ ತರಕಾರಿಗಳಾದ ಕುಂಬಳಕಾಯಿ, ಸೋರೆಕಾಯಿ, ತೊಂಡೆಕಾಯಿ, ಬಸಳೆ, ನುಗ್ಗೆ ಸೊಪ್ಪು, ಒಂದೆಲಗ, ವೀಳ್ಯದೆಲೆ, ಸಿಹಿಗೆಣಸು, ತೆಂಗಿನಕಾಯಿ ಹಾಗೂ ವಿವಿಧ ಹಣ್ಣು ಹಂಪಲುಗಳಾದ ಬಾಳೆಹಣ್ಣು, ಅಂಬಟೆಕಾಯಿ, ಕಬ್ಬು, ಜಂಬುನೇರಳೆ, ಚಕೋತ, ಅನನಾಸು, ನೆಲ್ಲಿಕಾಯಿ, ಮಾವಿನ ಹಣ್ಣು ಸೇರಿದಂತೆ ವಿವಿಧ ಹಣ್ಣುಗಳು ಮತ್ತು ವಿವಿಧ ಹಣ್ಣುಗಳಿಂದ ತಯಾರಿಸಿದ ತಂಪು ಪಾನೀಯಗಳಾದ ಕಲ್ಲಂಗಡಿ ಜ್ಯೂಸ್, ಎಳ್ಳು ಜ್ಯೂಸ್, ಗಸಗಸ್ ಜೂಸ್, ಚೋಕಲೇಟ್ ಜ್ಯೂಸ್, ಮಜ್ಜಿಗೆ, ಜೇನು ತುಪ್ಪ ಸೇರಿದಂತೆ ಬಾಯಾರಿಕೆಯನ್ನು ನೀಗಿಸುವ ಹಲವು ಬಗೆಯ ತಂಪು ಪಾನೀಯಗಳು ಗ್ರಾಹಕರ ಮನಸೂರೆಗೊಂಡಿತು.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿಯೇ ತಯಾರಿಸಿ ತಂದ ವಿವಿಧ ತಿಂಡಿಗಳಾದ ಬಟಾಟೆ ಬೋಂಡ, ಚಕ್ಕುಲಿ, ಚಿಪ್ಸ್, ಅಚ್ಚಪ್ಪ ಸೇರಿದಂತೆ ಅಕ್ಕಿಯಿಂದ ತಯಾರಿಸಿದ ರುಚಿಕರವಾದ ತಿಂಡಿಗಳು, ಚರುಮುರಿ ಅಂಗಡಿಗಳು, ಪಾನಿಪುರಿ ಅಂಗಡಿಗಳು, ಲಕ್ಕಿಗೇಮ್ ಅಂಗಡಿಗಳು, ಫ್ಯಾನ್ಸಿ ಅಂಗಡಿ, ಜವಳಿ ಅಂಗಡಿ, ಪುಸ್ತಕದ ಅಂಗಡಿಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ತೋರಿಸುತ್ತಿತ್ತು.
ಕಾರ್ಯಕ್ರಮವನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗೋಪಾಲ ಗೌಡ ರವರರು ಉದ್ಘಾಟಿಸಿ, ಶುಭ ಹಾರೈಸಿದರು. ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಹಸೀನಾ ಪರ್ವಿನ್ತಾಜ್, ಸದಸ್ಯರಾದ ಜೋಸೆಫ್ ಸೇರಿದಂತೆ ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ವ್ಯವಹಾರ ಕೌಶಲ್ಯವನ್ನು ಪ್ರಶಂಸಿ ಪ್ರೋತ್ಸಾಹಿಸಿದರು.
ಶಾಲಾ ಮುಖ್ಯಗುರುಗಳಾದ ಶ್ರೀಮತಿ ಜಯಂತಿ.ಬಿ.ಎಂ.ಸ್ವಾಗತಿಸಿದರು. ಮೆಟ್ರಿಕ್ ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ತೇಜಸ್ವಿ ಅಂಬೆಕಲ್ಲು, ಅಬ್ದುಲ್ ಲತೀಫ್.ಸಿ, ಶ್ರೀಮತಿ ಮನ್ವಿತಾ.ಡಿ, ದೈಹಿಕ ಶಿಕ್ಷಣ ಶಿಕ್ಷಕರಾದ ಜೋನ್.ಕೆ.ಪಿ, ಶಾಲಾ ಗೌರವ ಶಿಕ್ಷಕಿ ಶ್ರೀಮತಿ ಯಶಸ್ವಿನಿ ಕೆ.ಜಿ.ರವರು ಸೇರಿದಂತೆ ಎಲ್ಲಾ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ ಸಹಕರಿಸಿದರು.