ನೆಲ್ಯಾಡಿ: ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದರೆ ಅಥವಾ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಪಾಲಕರು ಹೀಯಾಳಿಸಬಾರದು. ಕಲಿಕೆಯ ಕಡೆ ಆಸಕ್ತಿ ಮೂಡುವಂತೆ ಪ್ರೋತ್ಸಾಹಿಸಬೇಕು ಎಂದು ಮಾಜಿ ಸೈನಿಕ ಹಾಗೂ ನಿವೃತ್ತ ಪ್ರಾಂಶುಪಾಲರಾದ ಮ್ಯಾಥ್ಯೂ ಹೇಳಿದರು. ಅವರು ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಉದನೆ ಇಲ್ಲಿನ ಪಾಲಕರ ಸಭೆಯಲ್ಲಿ ಮಾತನಾಡುತ್ತಾ, ಪ್ರತಿಯೊಬ್ಬ ಪಾಲಕರೂ ಮಕ್ಕಳಿಗಾಗಿ ತ್ಯಾಗ ಮಾಡಬೇಕು, ಮಕ್ಕಳು ಓದುವ ಸಮಯದಲ್ಲಿ ತಾವೂ ಬೇರೆ ಕೆಲಸದಲ್ಲಿ ತಲ್ಲೀನರಾಗದೆ ಮಕ್ಕಳ ಜೊತೆ ಇದ್ದು ಅವರನ್ನು ಪ್ರೋತ್ಸಾಹಿಸಿ ಮನೆಯಲ್ಲಿ ಕಲಿಕೆಯ ವಾತಾವರಣ ಸೃಷ್ಠಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳ ಮೇಲೆ ಪರಿಸರ, ಸಹವಾಸ ಯಾವುದೇ ಪರಿಣಾಮ ಬೀರುವುದಿಲ್ಲ, ಮನೆಯಿಂದಲೇ ಸಂಸ್ಕಾರ ಕಲಿಯುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟರು. ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಬೇಕಾದ ಸೂಕ್ತ ಆಹಾರ ನೀಡಬೇಕು, ಮೊಬೈಲ್, ಟಿ.ವಿಯಿಂದ ದೂರ ಉಳಿಯುವಂತೆ ನೋಡಿಕೊಳ್ಳಬೇಕು, ಮನೆಯಲ್ಲಿ ಪ್ರಾರ್ಥನೆ, ಊಟ ಎಲ್ಲರೂ ಒಟ್ಟಾಗಿ ಮಾಡಬೇಕು ಎಂದು ಅವರು ಹೇಳಿದರು.
ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮೇಹಿ ಜಾರ್ಜ್, ಉಪಾಧ್ಯಕರಾದ ಶ್ರೀಮತಿ ವಿಶಾಲಾಕ್ಷಿ, ಕಾರ್ಯದರ್ಶಿ ಸತೀಶ್ ಗೌಡ ಹಾಗೂ ಪಾಲಕ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಯಶೋಧರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.