ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನಗೊಂಡಿದೆ. ಮುಂಜಾನೆ 7.33 ರ ಧನುರ್ ಲಗ್ನದ ಮುಹೂರ್ತದಲ್ಲಿ ಸುಬ್ರಹ್ಮಣ್ಯ ಆದಿಯಾಗಿ ಉಮಾಮಹೇಶ್ವರ ದೇವರಿಗೆ ನಡೆದ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಳ್ಳುವ ಮೂಲಕ ದೇವರ ದರ್ಶನ ಪಡೆದು ಕೃತಾರ್ಥರಾದರು.
ನಾಗಾಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವದ ಸಂಭ್ರಮದಲ್ಲಿ ಭಕ್ತಿಯ ಪರಾಕಾಷ್ಟೆ ಮುಗಿಲು ಮುಟ್ಟಿತ್ತು, ಎಲ್ಲರ ಬಾಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಜೈಕಾರ ಮೊಳಗುತ್ತಿತ್ತು. ಭಕ್ತರ ಸಾಗರವೇ ಕುಕ್ಕೆ ಸುಬ್ರಹ್ಮಣ್ಯನ ಆರಾಧನೆಯಲ್ಲಿ ಮುಳುಗಿರುವ ದೃಶ್ಯಗಳು ಕಂಡುಬಂದಿದೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಮಹಾರಥೋತ್ಸವ ಸಂಪನ್ನಗೊಂಡಿದೆ. ಹದಿನಾರು ದಿನಗಳ ಕಾಲ ನಡೆಯುವ ಜಾತ್ರೋತ್ಸವದ ಕಾರ್ಯಕ್ರಮಗಳಲ್ಲಿ ಕ್ಷೇತ್ರದಲ್ಲಿ ಮೂರು ದಿನಗಳ ಆಚರಣೆಗಳು ವಿಶಿಷ್ಟವಾಗಿರುತ್ತದೆ.
ಚೌತಿ, ಪಂಚಮಿ ಹಾಗೂ ಷಷ್ಠಿಯಂದು ಇಲ್ಲಿ ವಿಶೇಷ ಸೇವೆಯಾದ ಎಡೆಮಡಸ್ನಾನದ ಜೊತೆಗೆ ಕ್ಷೇತ್ರಾಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಉಮಾಮಹೇಶ್ವರ ದೇವರಿಗೆ ರಥೋತ್ಸವವೂ ನಡೆಯುತ್ತದೆ. ಇಲ್ಲಿ ನಡೆಯುವ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ವಿಶಿಷ್ಟ ಮಹತ್ವವೂ ಇದೆ. ರಾಜ್ಯದ ಅತ್ಯಂತ ದೊಡ್ಡ ರಥಗಳಲ್ಲಿ ಸುಬ್ರಹ್ಮಣ್ಯ ರಥವೂ ಒಂದಾಗಿದೆ.
ಚಂಪಾ ಷಷ್ಠಿಯ ದಿನದಂದು ಈ ರಥೋತ್ಸವ ನಡೆಯುತ್ತಿದ್ದು, ಈ ಬಾರಿ ಧನುರ್ ಲಗ್ನದ 7.33 ರ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಿತು. ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಬಳಿಕ ಮೊದಲಿಗೆ ಪಂಚಮಿ ರಥದಲ್ಲಿ ಉ.ಮಾಮಹೇಶ್ವರ ದೇವರ ರಥೋತ್ಸವ ನಡೆದರೆ, ಬಳಿಕ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತದೆ. ರಥೋತ್ಸವ ನಡೆಯುವ ಸಂದರ್ಭದಲ್ಲಿ ಭಕ್ತಾಧಿಗಳು ರಥದ ಮೇಲೆ ಹೆಸರು ಕಾಳು, ಸಾಸಿವೆ ಕಾಳು ಮೊದಲಾದ ಪದಾರ್ಥಗಳನ್ನು ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸುವ ಸಂಪ್ರದಾಯವೂ ಇಲ್ಲಿದೆ.
ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುವ ಈ ಜಾತ್ರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ದೇಶ ಹಾಗೂ ವಿದೇಶಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಮೊದಲ ಬಾರಿಗೆ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ನೋಡಿದ ಭಕ್ತಾಧಿಗಳಿಗೆ ಜೀವನದಲ್ಲಿ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದ ಅನುಭವನ್ನು ಪಡೆಯುತ್ತಾರೆ. ಸುಬ್ರಹ್ಮಣ್ಯ ಸ್ವಾಮಿಯ ವಿವಾಹದ ದ್ಯೂತಕವಾಗಿ ಸ್ವಾಮಿಗೆ ಈ ರಥೋತ್ಸವನ್ನು ನಡೆಸಲಾಗುತ್ತದೆ.
ರಥವನ್ನು ಇಲ್ಲಿ ಹಗ್ಗದ ಬದಲು ಬಿದಿರಿನಿಂದಲೇ ಎಳೆಯಲಾಗುತ್ತದೆ. ಹೀಗೆ ಎಳೆದ ಬಿದಿರನ್ನು ರಥೋತ್ಸವದ ಬಳಿಕ ಭಕ್ತಾಧಿಗಳಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಬಿದಿರನ್ನು ಮನೆಯಲ್ಲಿ ಇರಿಸಿದಲ್ಲಿ ನಾಗದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ. ಈ ಬಾರಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆದಿದ್ದು, ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ.