ವಿದ್ಯಾರ್ಥಿನಿಯರಿಗೆ ಆ್ಯಸಿಡ್ ಎರಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದ ವಿದ್ಯಾರ್ಥಿಗಳು.. ಮಾಧ್ಯಮಗಳಿಗೆ ಸಿಕ್ಕಿತ್ತು ಸಿಸಿ ಟಿವಿ ವೀಡಿಯೋ..

ಶೇರ್ ಮಾಡಿ

ಕಡಬದ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಗುರಿಯಾಗಿಸಿ ಸೋಮವಾರ ಬೆಳಿಗ್ಗೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಎಂಬಿಎ ವಿದ್ಯಾರ್ಥಿ ಅಭಿನ್ ಕೃತ್ಯ ಎಸಗಲೆಂದು ಭಾನುವಾರ ತನ್ನ ಹುಟ್ಟೂರಾದ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದು,ನಂತರ ಕಡಬಕ್ಕೆ ಬಂದು ಕಡಬದಲ್ಲಿ ಬೇಕರಿಯೊಂದರ ಸಿಸಿ ಟಿವಿಯಲ್ಲಿ ಈತನ ಚಲನವಲನಗಳು ಪತ್ತೆಯಾಗಿತ್ತು.ಇದೀಗ ಆಸಿಡ್ ಎರಚಿ ಪರಾರಿಯಾಗುತ್ತಿದ್ದ ಆರೋಪಿ ಅಬಿನ್‌ನನ್ನು ವಿದ್ಯಾರ್ಥಿಗಳು ಅಟ್ಟಾಡಿಸಿಕೊಂಡು ಹೋಗಿ ಹಿಡಿದು ತರುತ್ತಿರುವ ಎಕ್ಸ್ಲೂಸಿವ್ ವೀಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದೆ.

ಅಭಿನ್‌ ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿ. ಭಾನುವಾರ ಮಧ್ಯಾಹ್ನ ರೈಲಿನ ಮೂಲಕ ನಿಲಂಬೂರಿನಿಂದ ಹೊರಟ ಆತ ರಾತ್ರಿ ವೇಳೆ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ಅಲ್ಲಿಯೇ ಬೆಳಿಗ್ಗೆಯವರೆಗೆ ಕಾಲ ಕಳೆದ ಆತ ಬಳಿಕ ಮಂಗಳೂರಿನಿಂದ ಬಸ್ಸು ಹಿಡಿದು ಕಡಬಕ್ಕೆ ಆಗಮಿಸಿದ್ದಾನೆ ಎನ್ನಲಾಗಿದೆ. ಅಬಿನ್ ಕಾಲೇಜ್‌ ಪ್ರವೇಶಿಸುವುದಕ್ಕೆ ಮುಂಚೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿಕೊಂಡು ಶಾಲಾ ಆವರಣ ಪ್ರವೇಶಿಸಿದ್ದಾನೆ. ಇದಕ್ಕೆ ಮುಂಚೆ ಈತ ಕಡಬದ ಕೆಳಗಿನ ಬಸ್‌ ನಿಲ್ದಾಣದ ಬಳಿ ಬೇಕರಿಯಲ್ಲಿ ತನ್ನಲ್ಲಿದ್ದ ಎರಡು ಮೊಬೈಲ್‌ ಫೋನ್‌ ಗಳನ್ನು ಚಾರ್ಜ್‌ಗಿಟ್ಟಿದ್ದ. ಈ ವೇಳೆಯೂ ಅತ ಕಪ್ಪು ಫ್ಯಾಂಟ್‌ ಹಾಗೂ ಕಪ್ಪು ಅಂಗಿ ಧರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೇಕರಿಗೆ ಆತ ಬೆಳಗ್ಗಿನ ಜಾವ 8 ಗಂಟೆ ಸುಮಾರಿಗೆ ಬಂದಿದ್ದಾನೆ. ಫೋನ್‌ ಚಾರ್ಜ್‌ಗಿಟ್ಟು, ಅಲ್ಲೇ ಒಂದು ಬ್ಯಾಗ್ ಬಿಟ್ಟಿದ್ದಾನೆ. ಆ ಬಳಿಕ ಬ್ಯಾಗಿನಿಂದ ಯಾವುದೋ ವಸ್ತುವನ್ನು ಪ್ಯಾಂಟ್ ಪಾಕೇಟಿಗೆ ಹಾಕಿ ಅಲ್ಲಿಂದ ಹೊರನಡೆಯುತ್ತಾನೆ. ನಂತರದಲ್ಲಿ ಆತ ಈ ಕಪ್ಪು ಬಣ್ಣದ ಬಟ್ಟೆಯನ್ನು ತಹಶಿಲ್ದಾರ್ ಕಚೇರಿ ಸಮೀಪದಲ್ಲಿ ಬಿಚ್ಚಿ ಅಲ್ಲಿಂದ ಯೂನಿಫಾರ್ಮ್ ಬಟ್ಟೆ ಧರಿಸಿ ಶಾಲಾ ಆವರಣ ಪ್ರವೇಶಿಸಿ ಅಸಿಡ್ ದಾಳಿ ನಡೆಸಿದ್ದ. ವಿದ್ಯಾರ್ಥಿನಿಯರ ಮೇಲೆ ಅಸಿಡ್ ಎರಚಿ ಓಡುತ್ತಿದ್ದ ಆರೋಪಿ ಅಬಿನ್‌ನನ್ನು ಕಾಲೇಜಿನ ಇತರ ವಿದ್ಯಾರ್ಥಿಗಳು ಓಡಿಸಿ ಹಿಡಿದು ತರುತ್ತಿರುವ ವೀಡಿಯೋ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ.

Leave a Reply

error: Content is protected !!