ನೆಲ್ಯಾಡಿ/ಕೊಕ್ಕಡ: ಜಗತ್ತಿನಾದ್ಯಂತ ಕ್ರೈಸ್ತರು ಗರಿಗಳ ಭಾನುವಾರ(ಪಾಮ್ ಸಂಡೇ)ದಿನವನ್ನು ಶ್ರದ್ಧಾಭಕ್ತಿಯಿಂದ ಮಾ.24ರಂದು ಆಚರಿಸಿದರು. ಈ ವಾರವನ್ನು ಯಾತನೆಯ ವಾರವೆಂದು ಕರೆಯಲಾಗುತ್ತದೆ.
ಗರಿಗಳ ಭಾನುವಾರದಂದು ಪ್ರಾರಂಭವಾಗುವ ಯೇಸುವಿನ ಯಾತ್ರೆ ಇಡೀ ವಾರ ಮುಂದುವರೆದು ಶುಕ್ರವಾರದಂದು ಅಂತಿಮ ತೆರೆ ಎಳೆಯುತ್ತದೆ. ಮುಂದಿನ ರವಿವಾರದವರೆಗೆ ಕ್ರೈಸ್ತ ಬಂಧುಗಳು ಪವಿತ್ರವಾರ ಆಚರಿಸಲಿದ್ದು ಮಾ.28ರಂದು ಶುಭ ಗುರುವಾರ, ಮಾ.29ರಂದು ಶುಭ ಶುಕ್ರವಾರವನ್ನಾಗಿ ಆಚರಿಸಿ ಮಾ.30ರಂದು ಈಸ್ಟರ್ ಸಂಡೇ ಹಬ್ಬಕ್ಕಾಗಿ ಕ್ರೈಸ್ತ ಬಾಂಧವರು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ. ಪರಿಶುದ್ಧವಾದ, ಬದುಕಿನ ಉತ್ಕೃಷ್ಟ ಭಾವನೆಗಳನ್ನು ಹೊರಹೊಮ್ಮುವ ಈ ವಾರ ಕ್ರೈಸ್ತ ಬಾಂಧವರಿಗೆ ಪವಿತ್ರ ವಾರವಾಗಿದೆ. ಅದರಂತೆ ನೆಲ್ಯಾಡಿ, ಉದನೆ, ಆರ್ಲ ಇಚ್ಚಿಲಂಪಾಡಿ, ಸಂತ ಜೋನರ ದೇವಾಲಯ ಕೌಕ್ರಾಡಿ-ಕೊಕ್ಕಡ ಚರ್ಚ್ ಹೀಗೆ ಆಯಾ ಚರ್ಚ್ಗಳಲ್ಲಿ ಧರ್ಮಗುರುಗಳು ದಿವ್ಯ ಪೂಜೆಯ ಮೊದಲು ಶುದ್ಧೀಕರಿಸಿದ ತಾಳೆಗರಿಗಳನ್ನು ಭಕ್ತರಿಗೆ ಹಂಚಲಾಯಿತು. ಬಳಿಕ ಭಕ್ತಿ ಮೆರವಣಿಗೆ ಮೂಲಕ ಭಕ್ತರು ಚರ್ಚ್ಗೆ ಆಗಮಿಸಿ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ಆಯಾ ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಪಾಲನಾ ಸಮಿತಿಯ ಸದಸ್ಯರು, ವಾಳೆ ಗುರಿಕಾರರು, ಚರ್ಚ್ ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ಗಾಯನ ಮಂಡಳಿಯವರು ಸಹಕರಿಸಿದರು.
ಪವಿತ್ರ ಸಪ್ತಾಹ ಆರಂಭ:
ಗರಿಗಳ ಭಾನುವಾರ ಪಿತನ ಚಿತ್ತಕ್ಕೆ ವಿಧೇಯರಾದ ಯೇಸು, ನಿತ್ಯಜೀವ ಅರಸಲು ಮೃತ್ಯುಪಾಶಕ್ಕೆ ಸಾಗುವ ಪ್ರಯಾಣದ ಸಂಕೇತ. ಈ ಭಾನುವಾರವನ್ನು ಗರಿಗಳ ಭಾನುವಾರ ಅಥವಾ ಶ್ರಮ-ಮರಣಗಳ, ಶೋಕ ಸಂಭ್ರಮಗಳ ಭಾನುವಾರವೆಂದು ಗುರುತಿಸುತ್ತೇವೆ. ಇಂದಿನ ಪೂಜಾವಿಧಿಯ ಮೊದಲನೆಯ ಭಾಗದಲ್ಲಿ ಯೇಸುಸ್ವಾಮಿಯು ಇಸ್ರಯೇಲರ ಜೈಕಾರಗಳೊಡನೆ ಜೆರುಸಲೇಮ್ ಮಹಾನಗರವನ್ನು ರಾಜನಂತೆ ಪ್ರವೇಶಿಸುವುದನ್ನು ನೆನಪಿಸಿಕೊಳ್ಳುತ್ತೇವೆ. ಎರಡನೆಯ ಭಾಗದಲ್ಲಿ ಯೇಸುಕ್ರಿಸ್ತರ ಯಾತನೆ ಮತ್ತು ಮರಣವನ್ನು ಸತ್ಯವೇದದ ವಾಚನಗಳಲ್ಲಿ ಮತ್ತು ಪವಿತ್ರ ಸಂಸ್ಕಾರಗಳಲ್ಲಿ ಸ್ಮರಿಸುವುದಾಗಿದೆ. ಜನತೆ ಯೇಸುಕ್ರಿಸ್ತರನ್ನು ತಾಳೆಗರಿಗಳಿಂದ ಆತ್ಮೀಯವಾಗಿ ಬರಮಾಡಿಕೊಂಡ ದಿನವನ್ನೇ ಕ್ರೈಸ್ತ ಸಮುದಾಯದವರುಪಾಮ್ ಸಂಡೇ ಆಗಿ ಆಚರಿಸುವುದು ಸಂಪ್ರದಾಯವಾಗಿದೆ.