ಚಾರ್ಮಾಡಿ ಘಾಟಿಯ 9ನೇ ತಿರುವಿನ ಸಮೀಪ ಒಂಟಿ ಸಲಗ ಎ. 8ರಂದು ಮಧ್ಯಾಹ್ನ 12ರ ಸುಮಾರಿಗೆ ರಾಜಾರೋಷವಾಗಿ ರಸ್ತೆ ದಾಟುತ್ತಿರುವ ವೀಡಿಯೋ ವೈರಲ್ ಆಗಿದೆ.
ಎರಡು ತಿಂಗಳ ಹಿಂದೆಯೂ ಕಾಡಾನೆ ನಾಲ್ಕಾರು ಬಾರಿ ಘಾಟಿ ಪರಿಸರದಲ್ಲಿ ಹಗಲಲ್ಲೇ ಸಂಚರಿಸಿ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಸೋಮವಾರ ನೆರಿಯದ ಬಾಂಜಾರು ಮಲೆ ಕಡೆಯಿಂದ ಆಗಮಿಸಿದ ಆನೆ ಸ್ವಲ್ಪ ಹೊತ್ತು ರಸ್ತೆ ಬದಿಯಲ್ಲಿ ನಿಂತು ಬಳಿಕ ರಸ್ತೆಯಲ್ಲಿ ಸಾಗಿ ನೆರಿಯ ಕಾಡಿನ ಕಡೆಗೆ ತೆರಳಿದೆ.
ರಸ್ತೆ ಬದಿಯಲ್ಲಿ ಆನೆಯನ್ನು ಗಮನಿಸಿದ ವಾಹನ ಸವಾರರು ಅದು ದಾಟಿ ಹೋಗಲು ಅನುಕೂಲವಾಗುವಂತೆ ವಾಹನ ಗಳನ್ನು ನಿಲ್ಲಿಸಿದ್ದರು. ಆದರೆ ರಸ್ತೆಯ ಒಂದು ಬದಿಯಲ್ಲಿ ವಾಹನಗಳಿಲ್ಲದ ಕಾರಣ ಆನೆ ಇರುವುದನ್ನು ತಿಳಿಯದೆ ಬೈಕ್ ಸವಾರರೊಬ್ಬ ಆನೆ ದಾಟುತ್ತಿರುವ ಸಮಯದಲ್ಲೇ ಸಂಚರಿಸಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು. ಈ ದೃಶ್ಯವನ್ನು ಪ್ರಯಾಣಿಕರು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.