ಗೋಳಿತೊಟ್ಟು: ಹಲವು ವರ್ಷಗಳಿಂದ ಸ್ಥಳೀಯವಾಗಿ ಅಡಿಕೆ ಕೃಷಿಗೆ ಕಾಡುವಂತಹ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗಕ್ಕೆ ವೈಜ್ಞಾನಿಕವಾಗಿ ತಜ್ಞರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಗೋಳಿತೊಟ್ಟು ಶ್ರೀಸಿದ್ಧಿ ವಿನಾಯಕ ಕಲಾಮಂದಿರದಲ್ಲಿ ನಡೆದ ನೆಲ್ಯಾಡಿ ಮಹಾಶಕ್ತಿ ಕೇಂದ್ರ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ದೇಶದ ಆಡಳಿತ ನೀತಿ ನಿರೂಪಣೆಯಲ್ಲಿ ಯುವ ಜನತೆಗೆ ದೊಡ್ಡ ಪಾತ್ರ ಇದೆ. ಯುವಕರು ದೇಶದ ಆ ದೊಡ್ಡ ಆಸ್ತಿ, ಪ್ರಜಾಪ್ರಭುತ್ವದಂತಹ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಬದಲಾವಣೆಗೆ ಯುವ ಜನತೆ ಮುನ್ನುಡಿ ಬರೆಯಬೇಕು ಎಂದರು.
ಸುಳ್ಯ ವಿಧಾನಸಭಾ ಶಾಸಕಿ ಕುಮಾರಿ ಭಾಗಿರಥಿ ಮುರುಳ್ಯ ಮಾತನಾಡಿ ಭಾರತ ದೇಶದ ಮಣ್ಣಿನ ಸಂಸ್ಕೃತಿ, ಭಾಷೆ ಉಳಿವಿಗಾಗಿ ಸಂಘಟನೆ ಹಿರಿಯರು ಹಾಕಿದ ಮಾರ್ಗದರ್ಶನಂತೆ ಬಿಜೆಪಿ ಪಕ್ಷ ನಡೆಯುತ್ತಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶವನ್ನು ನೀಡುವಂತ ಪಕ್ಷ ಇದಾಗಿದೆ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಅಂಗಾರ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಲೋಕಸಭಾ ಚುನಾವಣೆ ಉಸ್ತುವಾರಿ ಹರೀಶ್ ಕಂಜಿಪಿಲಿ, ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ, ನೆಲ್ಯಾಡಿ ಶಕ್ತಿಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಬಲ್ಯ, ಕೃಷ್ಣ ಶೆಟ್ಟಿ ಕಡಬ, ಅಪ್ಪಯ್ಯ ಮಣಿಯಾಣಿ, ಬಾಲಕೃಷ್ಣ ಬಾಣಜಾಲು ಮೊದಲಾದವರು ಉಪಸ್ಥಿತರಿದ್ದರು.
ರವಿರಾಜ್ ಸ್ವಾಗತಿಸಿದರು. ವಿನಯ ನಿರೂಪಿಸಿದರು. ನೂಜಿ ಚಂದ್ರಶೇಖರ್ ವಂದಿಸಿದರು.