ಕಡಬ ತಾಲೂಕು ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬ

ಶೇರ್ ಮಾಡಿ

ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರ ಹಾಗೂ ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬ ಮೇ 1ರಂದು ಧ್ವಜಾರೋಹಣಗೊಂಡು 7ರ ತನಕ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ. ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ಮದ್ರಾಸ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ. ವಂ. ಗೀವರ್ಗೀಸ್ ಮಾರ್ ಫಿಲಕ್ಸಿನೋಸ್ ಮೆತ್ರಾಪೋಲೀತ್ತಾ ರವರ ನೇತೃತ್ವದಲ್ಲಿ ಮತ್ತು ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ನಡೆಯಲಿದೆ.

ಮೇ 1ರಂದು ಬೆಳಿಗ್ಗೆ 9.30ಕ್ಕೆ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ. ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ರವರ ನೇತೃತ್ವದಲ್ಲಿ ಧ್ವಜಾರೋಹಣಗೊಂಡು, ಮೇ 7ರಂದು ಮದ್ರಾಸ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ. ವಂ. ಗೀವರ್ಗೀಸ್ ಮಾರ್ ಫಿಲಕ್ಸಿನೋಸ್ ಮೆತ್ರಾಪೋಲೀತ್ತಾ ರವರ ನೇತೃತ್ವದಲ್ಲಿ ಪವಿತ್ರ ದಿವ್ಯ ಬಲಿಪೂಜೆ ನಡೆಯಲಿದೆ.

ಮೇ 6ರಂದು ಸಂಜೆ ಪಾದಯಾತ್ರಿಗರಿಗೆ ಸ್ವಾಗತ, ರಾತ್ರಿ ಹಬ್ಬದ ಸಂದೇಶ, ಕಾಯರ್ತಡ್ಕ ಶಿಲುಬೆಯ ತನಕ ಮೆರವಣಿಗೆ, ಆಶೀರ್ವಾದ, ಅನ್ನಸಂತರ್ಪಣೆ ನಡೆಯಲಿದೆ.

ಮೇ 7ರಂದು ಮಧ್ಯಾಹ್ನ ಹಬ್ಬದ ಸಂದೇಶ, ಜೋರ್ಜಿಯನ್ ಪುರಸ್ಕಾರ, ಅನ್ನಸಂತರ್ಪಣೆ, ಏಲಂ. ಹೊಸಂಗಡಿ ಶಿಲುಬೆ ಗೋಪುರದ ತನಕ ಮೆರವಣಿಗೆ, ಆಶೀರ್ವಾದ, ಪ್ರಸಾದ ವಿತರಣೆ, ಸಂಜೆ ಹಬ್ಬದ ಧ್ವಜ ಇಳಿಸುವಿಕೆ, ಹಬ್ಬದ ಸಮಾರೋಪ ಪ್ರಾರ್ಥನೆ ನಡೆಯಲಿದೆ.

ಮೇ 6 ಮತ್ತು 7ರಂದು ಮೆರವಣಿಗೆಗೆ ಮೊದಲು ಉರುಳು ಸೇವೆಗೆ ಅವಕಾಶವಿದೆ. ಉರುಳು ಸೇವೆ ಮಾಡುವವರು ಸಭ್ಯವಾದ ಸಮವಸ್ತ್ರ ಧಾರಣೆ ಮಾಡತಕ್ಕದ್ದು. ಮೇ 7ರಂದು ಇಚ್ಲಂಪಾಡಿಯಿಂದ ನೆಲ್ಯಾಡಿ, ಕಡಬ, ಧರ್ಮಸ್ಥಳ, ಉಪ್ಪಿನಂಗಡಿ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಸರ್ವೀಸ್ ಇದೆ ಎಂದು ಚರ್ಚ್‌ನ ಧರ್ಮಗುರು ರೆ. ಫಾ. ವರ್ಗೀಸ್ ತೋಮಸ್ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲ್ಯಾಡಿಯಿಂದ 7 ಕಿ.ಮೀ. ಅಂತರದಲ್ಲಿ ಸಿಗುವ ಇಚ್ಲಂಪಾಡಿಯಲ್ಲಿರುವ ಕರ್ನಾಟಕದ ಜಾರ್ಜಿಯನ್ ತೀರ್ಥಾಟನಾ ಕೇಂದ್ರಕ್ಕೆ ವಾರ್ಷಿಕ ಹಬ್ಬದ ಸಂಭ್ರಮ. 1953ರಲ್ಲಿ ಇಲ್ಲಿ ಸಂತ ಜಾರ್ಜರ ಹೆಸರಿನಲ್ಲಿ ದೇವಾಲಯವನ್ನು ಸ್ಥಾಪಿಸಲಾಯಿತು. ಅದೇ ಇಂದು ಸೈಂಟ್ ಜಾರ್ಜ್ ಓರ್ಥೋಡಕ್ಸ್ ಸಿರಿಯನ್ ಚರ್ಚ್ ಎಂಬ ಹೆಸರಿನಲ್ಲಿ ಪ್ರಸಿದ್ದಿಯಾಗಿದೆ. ಇಲ್ಲಿ ಮೇ 6, 7ರಂದು ವಾರ್ಷಿಕ ಹಬ್ಬ (ಪೆರುನ್ನಾಳ್ ಮಹಾಮಹಂ)ನಡೆಯಲಿದೆ. ಹಬ್ಬದ ವಿಶೇಷಗಳ ಲ್ಲಿ ಭಕ್ತಾದಿಗಳು ಕೋಳಿ ಮತ್ತು ಅಪ್ಪವನ್ನು ಹರಕೆಯಾಗಿ ತರುವ ಸಂಪ್ರದಾಯವೂ ಒಂದಾಗಿದೆ.

2008ರಲ್ಲಿ ಇದನ್ನು ಜಾರ್ಜಿಯನ್ ತೀರ್ಥಾಟನಾ ಕೇಂದ್ರ ಎಂದು ಘೋಷಿಸಲಾಯಿತು. ತರುವಾಯ ಜೋರ್ಜಿಯನ್ ಪಿಲ್‌ಗ್ರಿಮ್ ಸೆಂಟರ್ ಎಂದು ಪ್ರಸಿದ್ಧಿ ಪಡೆಯಿತು. ಕೇರಳದಿಂದ ವ್ಯವಸಾಯ ನಿಮಿತ್ತ ಇಲ್ಲಿಗೆ ವಲಸೆ ಬಂದ ಸಿರಿಯನ್ ಕ್ರಿಶ್ಚಿಯನ್ನರ ಆಧ್ಯಾತ್ಮಿಕ ಬೇಡಿಕೆಗಳ ಪೂರೈಕೆಗೋಸ್ಕರ ಈ ದೇವಾಲಯವನ್ನು ಸ್ಥಾಪಿಸಲಾಯಿತು. ಕ್ರಿ.ಶ. 52ರಲ್ಲಿ ಸಂತ ಥೋಮಸರಿಂದ ಸ್ಥಾಪನೆಯಾದ ಓರ್ಥೋಡಕ್ಸ್ ಪಂಥಕ್ಕೆ ಈ ದೇವಾಲಯವು ಸೇರಿದೆ. ಕೇರಳದ ಕೊಟ್ಟಾಯಂನ ದೇವಲೋಕವು ಓರ್ಥೋಡಕ್ಸ್ ಸಭೆಯ ಕೇಂದ್ರ ಸ್ಥಾನವಾಗಿದೆ. ಇಚ್ಲಂಪಾಡಿ ದೇವಾಲಯವು ಬ್ರಹ್ಮಾವರ ಧರ್ಮಪ್ರಾಂತ್ಯದ ವಲಯಕ್ಕೆ ಸೇರಿದೆ. ಅತೀ. ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾರವರು ಈ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದಾರೆ.

ಇಚ್ಲಂಪಾಡಿ ಹಬ್ಬ:

ಇಚ್ಲಂಪಾಡಿ ಹಬ್ಬವೆಂದೇ ಪ್ರಸಿದ್ಧಿ ಹೊಂದಿರುವ ಸಂತ ಜಾರ್ಜರ ಹಬ್ಬವು ಮೇ 1ರಿಂದ 7ರ ವರೆಗೆ ನಡೆಯುತ್ತದೆ. ಮೇ 1ರಂದು ಧ್ವಜಾರೋಹಣ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಪ್ರತಿದಿನ ದಿವ್ಯ ಬಲಿ ಪೂಜೆ ನಂತರ ಧ್ಯಾನ ಹಾಗೂ ಪ್ರಾರ್ಥನೆ ನಿರಂತರವಾಗಿ ನಡೆಯುತ್ತದೆ. ಮೇ 6ರಂದು ಸಂಧ್ಯಾ ಪ್ರಾರ್ಥನೆ ಮತ್ತು ಮೆರವಣಿಗೆ ನಡೆಯುತ್ತದೆ. 7ನೇ ತಾರೀಖು ಹಬ್ಬದ ಸಮಾಪ್ತಿಯ ಸಂಭ್ರಮದ ದಿವ್ಯ ಬಲಿಪೂಜೆ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಎಲ್ಲ ಭಕ್ತಾದಿಗಳಿಗೂ ಮಧ್ಯಾಹ್ನ ಭೋಜನ ನೀಡಲಾಗುತ್ತದೆ. ಈ ಪ್ರಸಾದವನ್ನು ಭಕ್ತಾದಿಗಳು ಭಕ್ತಿಯಿಂದ ಸ್ವೀಕರಿಸುತ್ತಾರೆ .

ಅಪ್ಪ-ಕೋಳಿ ಹರಕೆ: ಸಂತ ಜಾರ್ಜರ ಮಧ್ಯಸ್ಥಿಕೆಯಲ್ಲಿ ಭಕ್ತಾದಿಗಳು ಕೋಳಿ ಮತ್ತು ಅಪ್ಪವನ್ನು ಹರಕೆಯಾಗಿ ತರುವ ಸಂಪ್ರದಾಯ ಇಲ್ಲಿ ಬಹಳ ಪ್ರಸಿದ್ಧಿಯಾಗಿದೆ. ಅದೇ ರೀತಿಯಾಗಿ ನಾನಾ ಧರ್ಮದ ಭಕ್ತರೂ ಇಲ್ಲಿಗಾಗಮಿಸಿ ತಮ್ಮ ಹರಕೆ ಈಡೇರಿಸಿಕೊಳ್ಳುವುದನ್ನು ಕಾಣಬಹುದು. ನಾನಾ ತರವಾದ ಕಾಣಿಕೆಗಳು, ಶಿಲುಬೆ ಹಿಡಿದು ಮೆರವಣಿಗೆ, ಉರುಳು ಸೇವೆ, ಮೊಣಕಾಲ ಮೇಲೆ ನಡೆಯುವುದು, ಮೇಣದ ಬತ್ತಿ ಉರಿಸುವುದು ಮೊದಲಾದ ಹರಕೆಗಳನ್ನು ಭಕ್ತಾದಿಗಳು ಸಂತೋಷದಿಂದ ನಡೆಸುತ್ತಾರೆ. ಭಕ್ತಿ ಪೂರ್ವಕವಾದ ಮೆರವಣಿಗೆ ಯೊಂದಿಗೆ ಕೊನೆಗೊಳ್ಳುವ ಹಬ್ಬದ ಆಚರಣೆಯ ಅಂತ್ಯದಲ್ಲಿ ಭಕ್ತ ವೃಂದಕ್ಕೆ ಹಬ್ಬದ ಪ್ರಸಾದವಾದ ಅಪ್ಪ ಮತ್ತು ಕೋಳಿ ಪದಾರ್ಥವನ್ನು ನೀಡಲಾಗುತ್ತದೆ.

ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಬಂದಿರುವುದು ಇಚ್ಲಂಪಾಡಿ ಸೈಂಟ್ ಜಾರ್ಜ್ ಓರ್ಥೊಡೋಕ್ಸ್ ಚರ್ಚ್ ಒಂದು ಪುಣ್ಯ ಭೂಮಿ ಎನ್ನುವುದಕ್ಕೆ ಸಾಕ್ಷಿಯಾಗಿದೆ.

Leave a Reply

error: Content is protected !!