ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಜನರು ತಮ್ಮ ಇಷ್ಟಾರ್ಥ ಸಿದ್ಧಿ ಈಡೇರಿದ ಫಲವಾಗಿ ಉರುಳು ಸೇವೆ
ಇಚ್ಲಂಪಾಡಿ ಹಬ್ಬವೆಂದೇ ಪ್ರಸಿದ್ದಿ ಹೊಂದಿರುವ ಸಂತ ಜೋರ್ಜರ ಹಬ್ಬವು ಪ್ರತೀ ವರ್ಷ ಮೇ.1 ರಿಂದ ಮೇ.07 ವರೆಗೆ ನಡೆಯುತ್ತದೆ.
ಇಚ್ಲಂಪಾಡಿ ಹಬ್ಬವೆಂದೇ ಪ್ರಸಿದ್ದಿ ಹೊಂದಿರುವ ಸಂತ ಜೋರ್ಜರ ಹಬ್ಬವು ಪ್ರತೀ ವರ್ಷ ಮೇ.1 ರಿಂದ ಮೇ.07 ವರೆಗೆ ನಡೆಯುತ್ತದೆ.
ಮೇ.6 ಹಾಗು 7 ರಂದು ಅತೀ ವಿಜೃಂಭಣೆಯಿಂದ ನಡೆಯುವುದು. ಮೇ.1 ರ ದಿವ್ಯ ಬಲಿ ಪೂಜೆಯ ನಂತರ ಧ್ವಜಾರೋಹಣದ ಮೂಲಕ ಈ ಐತಿಹಾಸಿಕ ಹಬ್ಬ ಪ್ರಾರಂಭಗೊಂಡು ಪ್ರತಿದಿನ ದಿವ್ಯ ಬಲಿಪೂಜೆಯ ನಂತರ ಧ್ಯಾನ ಪ್ರಾರ್ಥನೆ ನಿರಂತರವಾಗಿ ನಡೆಯುತ್ತದೆ. ಮೇ.6 ರಂದು ಸಂಧ್ಯಾ ಪ್ರಾರ್ಥನೆ ಹಾಗು ಮೆರವಣಿಗೆ ಹಾಗು ಮೇ.7 ರಂದು ದಿವ್ಯ ಬಲಿಪೂಜೆ ಧರ್ಮಾಧ್ಯಕ್ಷರುಗಳ ನೇತೃತ್ವದಲ್ಲಿ ನಡೆಯುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳಿಗೆ ಮಧ್ಯಾಹ್ನದ ಭೋಜನವನ್ನು ನೀಡಲಾಗುತ್ತದೆ. ದಿವ್ಯ ಬಲಿ ಪೂಜೆಯ ನಂತರ ಹರಕೆಗಳ ನೆರವೇರಿಸುವಿಕೆ ಪ್ರಾರಂಭವಾಗುತ್ತದೆ. ತದನಂತರ ಏಲಂ ಮೆರವಣಿಗೆ ಹಾಗೂ ಆಶೀರ್ವಾದದೊಂದಿಗೆ ಮುಕ್ತಾಯವಾಗುವ ಹಬ್ಬದಲ್ಲಿ ಭಕ್ತವೃಂದಕ್ಕೆ ಹಬ್ಬದ ಪ್ರಸಾದವಾದ ಅಪ್ಪ ಹಾಗು ಕೋಳಿ ಪದಾರ್ಥವನ್ನು ಎಲ್ಲರಿಗೂ ಹಂಚಲಾಗುತ್ತದೆ. ಸಂತ ಜೋರ್ಜರ ಮುಂದೆ ಕೈ ಜೋಡಿಸಿ ಪರಿಪೂರ್ಣ ಭಕ್ತಿ ಹಾಗು ಅಚಲ ವಿಶ್ವಾಸದಿಂದ ಬೇಡಿದವರ ಉದ್ದಿಷ್ಠ ಕಾರ್ಯ ಸಫಲವಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿದೆ ಎನ್ನುವದಕ್ಕೆ ವರ್ಷದಿಂದ ವರ್ಷಕ್ಕೆ ಇಲ್ಲಿಗಾಗಮಿಸುತ್ತಿರುವ ವೃಧಿಸುತ್ತಿರುವ ಭಕ್ತರ ಸಂಖ್ಯೆಯೇ ಸಾಕ್ಷಿ.
ಸ್ವ ಇಚ್ಛೆಯಿಂದ ನಡೆಯುವ ವಿಶಿಷ್ಟ ಸೇವೆ:
ಇಲ್ಲಿ ವಿವಿಧ ತೆರನಾದ ಕಾಣಿಕೆಗಳನ್ನು ಸಲ್ಲಿಸುವುದು, ಶಿಲುಭೆ ಹಿಡಿದು ಮೆರವಣಿಗೆ ಹೋಗುವುದು, ಉರುಳು ಸೇವೆ, ಮೊಣಕಾಲ ಮೇಲೆ ನಡೆಯುವುದು, ಮೇಣದ ಬತ್ತಿ ಉರಿಸುವುದು, ಕೋಳಿ ಹಾಗೂ ಅಪ್ಪವನ್ನು ಹರಕೆಯಾಗಿ ತರುವುದು, ಮಕ್ಕಳನ್ನು ದೇವರ ಮುಂದೆ ಸಮರ್ಪಿಸಿ ಪ್ರಾರ್ಥಿಸುವುದು, ವಿವಿಧ ತೆರನಾದ ಆರೋಗ್ಯದ ಸಮಸ್ಯೆಗಳಿಂದ ಕಾಡುತ್ತಿರುವ ಮಕ್ಕಳನ್ನು ಸಂತ ಜೋರ್ಜರ ಮಧ್ಯಸ್ಥಿಕೆಯಿಂದ ಸಮರ್ಪಿಸಿ ಪ್ರಾರ್ಥಿಸುವುದು, ದೇವಾಲಯದ ಆರಾಧನೆಗಾಗಿ ಬೇಕಾದ ವಸ್ತುಗಳನ್ನು ನೀಡುವುದು, ದಿವ್ಯ ಬಲಿ ಪೂಜೆಗೆ ಹಾಗು ಇತರ ಪ್ರಾರ್ಥನೆಗಳಿಗೆ ಪ್ರಾರ್ಥನೆಗಾಗಿ ಹೆಸರನ್ನು ನೀಡುವುದು, ವಿವಿದ ತೆರನಾದ ಸಮಸ್ಯೆಗಳಿಗೆ ತದರೂಪವನ್ನು ನೀಡಿ ಪ್ರಾರ್ಥಿಸುವದು ಮುಂತಾದ ರೀತಿಯ ಹರಕೆಗಳನ್ನು ಪ್ರಧಾನವಾಗಿ ಇಲ್ಲಿ ನಡೆಯುತ್ತದೆ. ಇದರಲ್ಲೂ ಸ್ವ ಇಚ್ಛೆಯಿಂದ ಅತ್ಯಂತ ಕಷ್ಟಕರವಾದ ಉರುಳು ಸೇವೆಯು ಅತ್ಯಂತ ಪ್ರಮುಖವಾದ ಸೇವೆಯು ಈ ಚರ್ಚ್ ನಲ್ಲಿ ನಡೆಯುತ್ತದೆ. ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದಲೂ ಉರುಳು ಸೇವೆಯನ್ನು ಸಲ್ಲಿಸಲು ಭಕ್ತರು ಆಗಮಿಸುತ್ತಾರೆ. ಮೇ 1ರಿಂದ ಮೇ 7ರವರೆಗೆ ಬೆಳಗಿನ ಹಾಗೂ ಸಂಜೆಯ ಪ್ರಾರ್ಥನೆಯ ಬಳಿಕ ಎರಡು ಅವಧಿಗಳಲ್ಲಿ ಹಬ್ಬ ಮುಕ್ತಾಯದವರೆಗೆ ಸುಮಾರು 5 ಸಾವಿರಕ್ಕಿಂತ ಅಧಿಕ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಜನರು ತಮ್ಮ ಇಷ್ಟಾರ್ಥಸಿದ್ಧಿ ಈಡೇರಿದ ಫಲವಾಗಿ ಉರುಳು ಸೇವೆಯನ್ನು ಅರ್ಪಿಸುವುದು ಇಲ್ಲಿ ಅತ್ಯಂತ ವಿಶಿಷ್ಟವಾಗಿದೆ.
ಹಿಂದೆ ಚರ್ಚ್ ನ ಸುತ್ತ ಉರುಳು ಸೇವೆ ನಡೆಯುತ್ತಿತ್ತು. ಭಕ್ತಾದಿಗಳ ಸಂಖ್ಯೆ ಹೆಚ್ಚಾದಾಗ ವ್ಯವಸ್ಥೆ ದೃಷ್ಟಿಯಿಂದ ಸುಮಾರು 15 ವರುಷಗಳಿಂದ ಈಚೆಗೆ ಚರ್ಚ್ ನ ಎದುರುಗಡೆ ಸೇವೆ ನೀಡಲು ಅವಕಾಶವನ್ನು ನೀಡಲಾಗಿದೆ. ಸ್ವ ಇಚ್ಛೆಯಿಂದ ಭಕ್ತಾದಿಗಳು ತಮ್ಮ ಸಂಕಷ್ಟ ಈಡೇರಿದ ಫಲವಾಗಿ ಅತ್ಯಂತ ಕಷ್ಟದ ಈ ಸೇವೆಯನ್ನು ನೀಡುತ್ತಿದ್ದಾರೆ.
-ಕುರಿಯನ್, ಚರ್ಚ್ ನ ಸದಸ್ಯರು
ಸ್ವದೇಶದಿಂದ ಊರಿಗೆ ಬರಲು ಸಮಸ್ಯೆ ಬಂದಾಗ, ಉರುಳು ಸೇವೆಯನ್ನು ಮಾಡುವ ಬಗ್ಗೆ ಬೇಡಿಕೊಂಡಾಗ, 15 ದಿನಗಳಲ್ಲಿ ಊರಿಗೆ ಬರಲು ಸಾಧ್ಯವಾಯಿತು. ಇದೀಗ 9 ವರ್ಷಗಳಿಂದ ಪ್ರತಿ ವರ್ಷ ಸೇವೆಯನ್ನು ನೀಡುತ್ತಿದ್ದೇನೆ
-ರೋಹಿ.ಟಿ.ಎಮ್., ಕಲ್ಲರ್ಬ ಗ್ರಾ.ಪಂ.ಸದಸ್ಯರು ಇಚಲಂಪಾಡಿ
ಆರೋಗ್ಯದಲ್ಲಿ ತೊಂದರೆಯಾಗಿ ವೈದ್ಯರು ಶಸ್ತ್ರ ಚಿಕಿತ್ಸೆಯ ಮಾಡಲೇಬೇಕು ಎಂದಾಗ, ಇಲ್ಲಿ ಪ್ರಾರ್ಥಿಸಿಕೊಂಡ ಪ್ರಕಾರ ಯಾವುದೇ ಚಿಕಿತ್ಸೆ ಇಲ್ಲದೆ ಸಂಪೂರ್ಣವಾಗಿ ಗುಣವಾಗಿದೆ. ಈಗ 6 ವರ್ಷದಿಂದ ಪ್ರತಿವರ್ಷ ಸೇವೆಯನ್ನು ನೀಡುತ್ತಿದ್ದೇನೆ.
-ಮೇಹಿ ಜಾರ್ಜ್, ವಿದ್ಯಾರ್ಥಿ ಇಚಲಂಪಾಡಿ
ಹೊಸ ಮನೆ ನಿರ್ಮಾಣದ ಬಗ್ಗೆ ಪ್ರಾರ್ಥಿಸಿದ ಪ್ರಕಾರ, ಒಂದು ವರುಷದ ಒಳಗೆ ಈಡೇರಿದೆ ಇದೀಗ ಏಳು ವರುಷಗಳಿಂದ ಸೇವೆಯನ್ನು ನೀಡುತ್ತಿದ್ದೇನೆ.
-ಬ್ಲೇಸ್ಸಿ, ಮಂಗಳೂರು