ಗೋಳಿತ್ತೊಟ್ಟು: ಮಳೆಗೆ ವ್ಯಾಪಾಕ ಹನಿ

ಶೇರ್ ಮಾಡಿ

* ಮರಬಿದ್ದು ರಸ್ತೆ ಸಂಚಾರ ಬಂದ್
* 2 ವಿದ್ಯುತ್ ಕಂಬಕ್ಕೆ ಹಾನಿ
* ಮನೆಗೆ ಸಿಡಿಲು ಬಡಿದು ಹಾನಿ

ನೆಲ್ಯಾಡಿ: ಮೇ.18ರಂದು ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಗೋಳಿತ್ತೊಟ್ಟು ಪರಿಸರದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಗೋಳಿತ್ತೊಟ್ಟು ಸಮೀಪ ರಸ್ತೆಗೆ ಮರಬಿದ್ದು ಸುಮಾರು 1 ತಾಸು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಎರಡು ಕಡೆ ವಿದ್ಯುತ್ ತಂತಿ ಮೇಲೆ ಮರಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿವೆ. ಆಲಂತಾಯದಲ್ಲಿ ಸಿಡಿಲು ಬಡಿದ ಪರಿಣಾಮ ಮನೆಯೊಂದಕ್ಕೆ ಹಾನಿಯಾಗಿರುವುದಾಗಿ ವರದಿಯಾಗಿದೆ.

ಮರಬಿದ್ದು ರಸ್ತೆ ಸಂಚಾರ ಬಂದ್:
ಗೋಳಿತ್ತೊಟ್ಟು-ಆಲಂತಾಯ ರಸ್ತೆಯ ಗೋಳಿತ್ತೊಟ್ಟು ಸಮೀಪ ಮರವೊಂದು ಮುರಿದು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಸುಮಾರು 1 ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳೀಯರು ಮರ ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಪುನರಾರಂಭಗೊಂಡಿತು.

2 ವಿದ್ಯುತ್ ಕಂಬಕ್ಕೆ ಹಾನಿ:
ಗೋಳಿತ್ತೊಟ್ಟು ಕೊಕ್ಕಡ ಕ್ರಾಸ್ ಸಮೀಪ ವಿದ್ಯುತ್ ತಂತಿಯ ಮೇಲೆ ಬೃಹತ್ ಮರಬಿದ್ದ ಪರಿಣಾಮ ವಿದ್ಯುತ್ ಕಂಬವೊಂದು ತುಂಡಾಗಿದೆ. ಇನ್ನೊಂದೆಡೆ ಅಲೆಕ್ಕಿ ಸಮೀಪವೂ ಮರಬಿದ್ದ ಪರಿಣಾಮ ವಿದ್ಯುತ್ ಕಂಬವೊಂದು ತುಂಡಾಗಿದೆ. ಪವರ್‌ಮ್ಯಾನ್ ದುರ್ಗಾಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಸಿಡಿಲು ಬಡಿದು ಮನೆಗೆ ಹಾನಿ:
ಆಲಂತಾಯ ಗ್ರಾಮದ ಪಾಲೇರಿ ನಿವಾಸಿ ಕಮಲಾಕ್ಷ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಹಾನಿಯಾಗಿದೆ. ಮನೆಯ ಮೀಟರ್ ಬೋರ್ಡ್, ವಿದ್ಯುತ್ ವಯರ್‌ಗಳು ಸುಟ್ಟುಹೋಗಿವೆ. ಗೋಡೆ ಬಿರುಕು ಬಿಟ್ಟಿದ್ದು ಒಂದೆರಡು ಹಂಚುಗಳೂ ಹುಡಿಯಾಗಿವೆ ಎಂದು ವರದಿಯಾಗಿದೆ. ಘಟನೆ ವೇಳೆ ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಒಟ್ಟಿನಲ್ಲಿ ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಗೋಳಿತ್ತೊಟ್ಟು, ಆಲಂತಾಯ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.

Leave a Reply

error: Content is protected !!