ನೆಲ್ಯಾಡಿ: ಸೇತುವೆ ಕಾಮಗಾರಿ ವೇಳೆ ಕಾಂಕ್ರಿಟ್ ಭಾರ ತಾಳಲಾರದೇ ಜೋಡಿಸಿಟ್ಟಿದ್ದ ಕಬ್ಬಿಣದ ಸರಳು, ಹಲಗೆ ಕುಸಿದುಬಿದ್ದ ಘಟನೆ ಮೇ 29ರಂದು ಸಂಜೆ ರೆಖ್ಯ ಗ್ರಾಮದ ಪರಕ್ಕಳ ಎಂಬಲ್ಲಿ ನಡೆದಿದೆ.
ಅಡ್ಡಹೊಳೆ-ಬಿ.ಸಿ.ರೋಡ್ ನಡುವೆ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಈ ಭಾಗದ ಕಾಮಗಾರಿಯನ್ನು ಔತ್ತಡೆ ಕನ್ಸ್ಟ್ರಕ್ಷನ್ ಕಂಪನಿಯವರು ಮಾಡುತ್ತಿದ್ದು ರೆಖ್ಯ ಗ್ರಾಮದ ಪರಕ್ಕಳ ಎಂಬಲ್ಲಿ ತೋಡಿಗೆ ಅಡ್ಡವಾಗಿ ನಿರ್ಮಾಣಗೊಂಡಿದ್ದ ಹಳೆಯ ಸೇತುವೆ ತೆಗೆದು ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಲ್ಲಿ ತೋಡಿಗೆ ಎರಡು ಪಿಲ್ಲರ್ ಹಾಕಿ ಅಂದಾಜು 25 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಪಿಲ್ಲರ್ ಕಾಮಗಾರಿ ಮುಗಿದಿದ್ದು ಅದರ ಮೇಲೆ ಹಲಗೆ, ಕಬ್ಬಿಣದ ಸರಳು ಜೋಡಿಸಿ ಮೇ 29ರಂದು ಸಂಜೆ ಯಂತ್ರದ ಮೂಲಕ ಕಾಂಕ್ರಿಟ್ ತುಂಬಿಸಲಾಗುತಿತ್ತು. ಸುಮಾರು 10 ಮೀಟರ್ನಷ್ಟು ಕಾಂಕ್ರಿಟ್ ತುಂಬಿಸುತ್ತಿದ್ದಂತೆ ಭಾರ ತಾಳಲಾರದೇ ಜೋಡಿಸಿದ್ದ ಹಲಗೆ, ಕಬ್ಬಿಣದ ಸರಳಿನ ಜೊತೆಗೇ ಕಾಂಕ್ರಿಟ್ ತೋಡಿಗೆ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ. ಇದರಿಂದಾಗಿ ಇಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಯಂತ್ರದ ಮೂಲಕ ಕಾಂಕ್ರಿಟ್ ಹಾಕುತ್ತಿದ್ದುದ್ದರಿಂದ ಯಾವುದೇ ಅನಾಹುತ ನಡೆದಿಲ್ಲ. ಇಲ್ಲಿ ಸಮರ್ಪಕವಾದ ಭೀಮ್ ಅಳವಡಿಸಿಲ್ಲ, ಕಳಪೆ ಕಾಮಗಾರಿಯಿಂದಾಗಿ ಈ ಅವಘಡ ನಡೆದಿದೆ ಎಂದು ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಆರೋಪಿಸಿದ್ದಾರೆ. ಇದರ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಗೊಂಡಿದ್ದು ಕೆಲ ದಿನಗಳಿಂದ ವಾಹನಗಳು ಹೊಸ ಸೇತುವೆ ಮೂಲಕ ಸಂಚರಿಸುತ್ತಿವೆ.