ಕೊರಗಜ್ಜ ಭಕ್ತರಿಂದ ಫೇಸ್‌ಬುಕ್‌ನಲ್ಲಿ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

ಶೇರ್ ಮಾಡಿ

ಉಳ್ಳಾಲ:ಕುತ್ತಾರು ದೆಕ್ಕಾಡಿನ ಶ್ರೀ ಕೊರಗಜ್ಜ ದೈವದ ಆದಿ ಸ್ಥಳಗಳ ಆಡಳಿತ ಮಂಡಳಿಯ ಸುಪರ್ದಿಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದು ಇದರ ವಿರುದ್ಧ ಡಿವೋಟಿಸ್‌ ಆಫ್‌ ಕುತ್ತಾರು ಕೊರಗಜ್ಜ ಎಂಬ ಶಿರೋನಾಮೆಯಲ್ಲಿ ಖಾತೆ ತೆರೆದು ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸುತ್ತಿರುವ ಸಂಸ್ಥೆಯ ವಿರುದ್ಧ ಸೈಬರ್‌ ಎಕಾನಾಮಿಕ್‌ ಎಂಡ್‌ ನಾರ್ಕೊಟಿಕ್‌ (ಸೆನ್‌) ಪೊಲೀಸ್‌ ಠಾಣೆಗೆ ಕುತ್ತಾರು ಆಡಳಿತ ಮಂಡಳಿ ದೂರು ನೀಡಿದೆ.

ಕೊರಗಜ್ಜನ ಆಡಳಿತ ಮಂಡಳಿಯು ಯಾವುದೇ ಉದ್ದೇಶಕ್ಕಾಗಿ ಆನ್‌ಲೈನ್‌ ಮುಖಾಂತರ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸುತ್ತಿಲ್ಲ. ಕೊರಗಜ್ಜ ದೈವದ ಮೇಲೆ ಸಾರ್ವಜನಿಕರಿಗೆ ಇರುವ ಭಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡು ಡಿವೋಟಿಸ್‌ ಆಫ್‌ ಕುತ್ತಾರು ಕೊರಗಜ್ಜ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಶ್ರೀ ಕ್ಷೇತ್ರದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವುದು ಕೂಡ ಕಾನೂನು ಬಾಹಿರವಾಗಿದ್ದು, ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. ಸೆನ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!